ಎಂಇಎಸ್ ಮತ್ತು ಶಿವಸೇನೆ ಪುಂಡಾಟದ ವಿರುದ್ಧ ಆಕ್ರೋಶ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ

20-12-rama-protest1
Published on

ರಾಮನಗರ: ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆಯ ಪುಂಡರು ವೀರಸೇನಾನಿ ಸಂಗೊಳ್ಳಿರಾಯಣ್ಣ ಅವರ ಪುತ್ಥಳಿಯನ್ನು ಜಖಂ ಮಾಡಿರುವುದು, ಪೊಲೀಸ್ ವಾಹನಗಳು, ಸರ್ಕಾರಿ ಕಚೇರಿ ಮತ್ತು ಕನ್ನಡಿಗರ ಮೇಲೆ ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಆಂಜನಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ, ಬೆಳಗಾವಿ ಜಮ್ಮು ಕಾಶ್ಮೀರದಂತೆ ಭಯೋತ್ಪಾದಕರ ತಾಣವಾಗುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಇದಕ್ಕೆ ಕೆಲ ಶಾಸಕರು ನೇರ ಹೊಣೆಯಾಗಿದ್ದಾರೆ. ಇವರ ಸಹಕಾರದಿಂದಲೇ ಮಹಾರಾಷ್ಟ್ರದ ಪುಂಡರು ಎಂಇಎಸ್ ಸಂಘಟನೆಯನ್ನು ಬೆಳೆಸಿ ಬೆಳಗಾವಿಯನ್ನು ಕಬಳಿಸುವ ತಂತ್ರ ಮಾಡುತ್ತಿದ್ದಾರೆ. ಬೆಳಗಾವಿಯ ಅಧಿವೇಶನದಲ್ಲಿ ರಾಜ್ಯದ ಮುಖ್ಯಮಂತ್ರಿ ಸೇರಿ ಸರ್ಕಾರವೇ ಇರುವ ವೇಳೆ ಎಂಇಎಸ್ ಮತ್ತು ಶಿವಸೇನೆ ಈ ರೀತಿ ಕೃತ್ಯ ಮಾಡಿರುವುದು ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ಎರಡೂ ಸಂಘಟನೆಗಳನ್ನು ನಿಷೇಧ ಮಾಡಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ವೆಂಕಟೇಶ್, ಕಾರ್ಮಿಕ ಸೇನೆಯ ವೆಂಕಟರಮಣ, ಗಿರೀಶ್.ಕೆ, ಬೈರಾಜು, ಶಿವಕುಮಾರ್, ಯಶಸ್, ದೀಪು, ಸುನೀಲ್, ಸತ್ಯ ಮುಂತಾದವರು ಇದ್ದರು.

ಕರವೇ ಪ್ರತಿಭಟನೆ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ರಾಮನಗರ ಜಿಲ್ಲಾ ಘಟಕ ವತಿಯಿಂದ ಎಂ.ಇ.ಎಸ್ ಹಾಗೂ ಶಿವಸೇನೆ ಸಂಘಟನೆಗಳು ಕರ್ನಾಟಕದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿಘ್ನಗೊಳಿಸಿರುವ ಎಂಇಎಸ್ ಪುಂಡರು, ಕೆ.ಎಸ್.ಆರ್.ಟಿ.ಸಿ ಬಸ್, ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸರ್ಕಾರದ ಆಸ್ತಿಪಾಸ್ತಿ ಹಾನಿ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ನಗರದ ಐಜೂರು ಸರ್ಕಲ್ನಲ್ಲಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯ ಸರ್ಕಾರ ಕೂಡಲೇ ಈ ಎರಡು ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ರಾಜ್ಯದಲ್ಲಿ ಶಾಶ್ವತವಾಗಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ರಾಜು, ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಕನ್ನಡ ಮಂಜು, ಗೌರವಾಧ್ಯಕ್ಷ ಮಂಜು ಶಂಕರಣ್ಣ, ಪದಾಧಿಕಾರಿಗಳಾದ ಮಾದೇಗೌಡ, ಪ್ರತಾಪಗೌಡ, ಹರೀಶ್, ಮಂಜುನಾಥ್, ಮಾಲಿಂಗ, ಪ್ರದೀಪ್ ಕುಮಾರ್, ನಾಗರಾಜು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net