

ಕಿಕ್ಕೇರಿ: ಕಿಕ್ಕೇರಿ ಹೋಬಳಿಯ ಕೆರೆ-ಕಟ್ಟೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ಧರಣಿ ನಡೆಸಿತು.
ಹೋಬಳಿಯ ಗಂಗೇನಹಳ್ಳಿ ಕೆರೆಯ ಮಧ್ಯ ಭಾಗದಲ್ಲಿ ಜಮಾವಣೆಗೊಂಡಿದ್ದ ನೂರಾರು ಕರವೇ ಕಾರ್ಯಕರ್ತರು, ಒಂದು ವರ್ಷದಿಂದಲೂ ಕೆರೆ ಬರಿದಾಗಿದೆ. ತುಂಬಿರುವ ಹೂಳನ್ನು ತೆಗೆಸಿಲ್ಲ. ಮುಂಗಾರಿನಲ್ಲಿಯೇ ಕೆರೆ ಬತ್ತಿರುವುದರಿಂದ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಜಲಚರಗಳು ಮೃತಪಟ್ಟಿವೆ. ಇದಕ್ಕೆಲ್ಲ ರಾಜ್ಯ ಸರಕಾರ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರೆ ನೀರನ್ನು ಆಶ್ರಯಿಸಿ ಬೆಳೆಯಲಾಗಿದ್ದ ಬೆಳೆಗಳು ಕೂಡ ನೀರಿಲ್ಲದೆ ಒಣಗಿ ನಿಂತಿವೆ. ಹುರುಳಿ, ಎಳ್ಳು ಬಿತ್ತಲು ನೀರಿಲ್ಲ. ಹೇಮಾವತಿ ನದಿಯಿಂದ ಪಕ್ಕದ ತಮಿಳುನಾಡಿಗೆ ನೀರು ಹರಿಸುವ ಅಧಿಕಾರಿಗಳಿಗೆ ನಮ್ಮದೇ ಹೋಬಳಿಯಲ್ಲಿ ಬಣಗುಡುತ್ತಿರುವ ಕೆರೆ-ಕಟ್ಟೆಗಳು ಕಾಣಿಸುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಕೆರೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ, ಹೋ. ಅಧ್ಯಕ್ಷ ಪದ್ಮನಾಭ್, ಪುನೀತ್, ಶಿವು, ಲೋಕೇಶ್, ಆನಂದ ಮತ್ತಿತರರಿದ್ದರು.