ಮಿಮ್ಸ್ ಆಸ್ತಿ ಉಳಿಸಲು ಅಭಿಯಾನ ಜೂ.30ರಿಂದ: ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಹೇಳಿಕೆ

Karave press conference Mandya
Published on

ಮಂಡ್ಯ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಸೇರಿದ ಆಸ್ತಿ ಉಳಿಸುವ ನಿಟ್ಟಿನಲ್ಲಿ ಜೂ.30ರಿಂದ ಕನ್ನಡಿಗರ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ತಿಳಿಸಿದರು.

ಸಂಸ್ಥೆಗೆ ಸೇರಿದ 18 ಎಕರೆ ಜಮೀನು ಉಳಿಸಲು ಆಂದೋಲನಾ ನಡೆಸಲಾಗುತ್ತಿದೆ. ನಗರದ 35 ವಾರ್ಡ್‌ನಲ್ಲಿ ಬೈಕ್ ಮತ್ತು ತೆರೆದ ವಾಹನದ ಮೂಲಕ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ಮಿಮ್ಸ್ ಅಭಿವೃದ್ಧಿಗೆ ಕೈಜೋಡಿಸುವಂತೆ ನಿವಾಸಿಗಳಲ್ಲಿ ಮನವಿ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎರಡನೇ ಹಂತದಲ್ಲಿ ಮಂಡ್ಯ ಗ್ರಾಮಾಂತರ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು. ತಮಿಳು ಕಾಲನಿ ನಿವಾಸಿಗಳಿಗಾಗಿ ಅಂದಾಜು 38 ಕೋಟಿ ರೂ ವೆಚ್ಚದಲ್ಲಿ 576 ಮನೆ ನಿರ್ಮಿಸಲಾಗಿದೆ. ಆದರೆ ಈ ಮನೆಗಳು ಅನ್ಯರ ಪಾಲಾಗುವುದಕ್ಕೆ ಕುಮ್ಮಕ್ಕು ನೀಡುತ್ತಿರುವ ಕೆಲವು ರಾಜಕಾರಣಿಗಳ ಧೋರಣೆ ಖಂಡಿಸಲಾಗುವುದು. ಇದಲ್ಲದೆ ಅನಧಿಕೃತವಾಗಿ ಪ್ರವೇಶ ಮಾಡಿರುವ ಬಗ್ಗೆಯೂ ವಿರೋಧ ವ್ಯಕ್ತಪಡಿಸಲಾಗುವುದು ಎಂದರು.

ಕೇವಲ ಮತಬ್ಯಾಂಕಿಗಾಗಿ ರಾಜಕಾರಣ ಮಾಡುವ ಮೂಲಕ ಮಿಮ್ಸ್‌ಗೆ ಸೇರಿದ 18 ಎಕರೆ ಭೂಮಿಯನ್ನು ಪರರ ಪಾಲಾಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಜಿಲ್ಲೆಯ ಜನರು ಅವಕಾಶ ಕೊಡುವುದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಈ ಜಮೀನು ಆಸ್ಪತ್ರೆಯ ಉಪಯೋಗಕ್ಕೆ ಹಾಗೂ ಹೆಚ್ಚುವರಿ ಚಿಕಿತ್ಸೆ ನೀಡಲು ಸುಸಜ್ಜಿತ ಕಟ್ಟಡ ಹಾಗೂ ಸೌಲಭ್ಯವನ್ನು ಬಡ ರೋಗಿಗಳಿಗೆ ನೀಡಲು ಸಂಬಂಧಪಟ್ಟ ಇಲಾಖೆಗಳು ಮತ್ತು ಸರ್ಕಾರ ಮುಂದಾಗುವಂತೆ ಆಂದೋಲನ ನಡೆಸುತ್ತಿದ್ದೇವೆ. ಒಟ್ಟಾರೆ 1 ಲಕ್ಷ ಕರಪತ್ರ ಹಂಚಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ವೇದಿಕೆಯ ಮುಖಂಡರಾದ ಎಸ್.ಎನ್.ಪ್ರವೀಣ್, ಶಿವರಾಮೇಗೌಡ, ನಾಗಣ್ಣ, ಪಿ.ಎ.ಜೋಸೆಫ್, ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net