ತಮಿಳು ಕಾಲನಿ ನಿವಾಸಿಗಳಿಗೆ ಮನೆ ಕೊಡಲಿ: ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಒತ್ತಾಯ

Karave press conference Mandya
Published on

ಮಂಡ್ಯ: ನಗರದ ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳನ್ನು ತಮಿಳು ಕಾಲನಿ ನಿವಾಸಿಗಳಿಗೆ ವಿತರಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಎಚ್.ಶಿವರಾಮೇಗೌಡ ಬಣ)ಯ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮ ಒತ್ತಾಯಿಸಿದರು.

ಮಿಮ್ಸ್ ಕಾಲೇಜಿಗೆ ಸೇರಿದ ಸ್ಥಳದಲ್ಲಿರುವ ತಮಿಳು ಕಾಲನಿ ನಿವಾಸಿಗಳಿಗೆಂದೇ ಕೆರೆಯಂಗಳದಲ್ಲಿ ಮನೆ ನಿರ್ಮಿಸಲಾಗಿದೆ. ಆದರೀಗ ಆ ಮನೆಗಳನ್ನು ಅನ್ಯರಿಗೆ ನೀಡಲು ಮುಂದಾಗಿರುವುದು ಸರಿಯಲ್ಲ. ಜೂ.3ರಂದು ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಆದರೆ ಇದು ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.

ತಮಿಳು ಕಾಲನಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ ಕೆರೆಯಂಗಳಕ್ಕೆ ಸ್ಥಳಾಂತರಿಸುವಂತೆ ಹೈಕೋರ್ಟ್ ಆದೇಶದ ಹಿನ್ನಲೆ 2018ರಲ್ಲಿ ರಾಜೀವ್ ಆವಾಸ್ ಯೋಜನೆಯಡಿ 38 ಕೋಟಿ ರೂ ವ್ಯಯಿಸಿ 576 ಮನೆ ನಿರ್ಮಿಸಲಾಗಿತ್ತು. ಅದರಂತೆ ತಮಿಳು ಕಾಲನಿ ನಿವಾಸಿಗಳಿಗೆ ಮನೆ ನೀಡಬೇಕು. ಈ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಣಿಗ ಕ್ರಮ ವಹಿಸಬೇಕು. ಅದನ್ನು ಬಿಟ್ಟು ತಮಿಳು ಕಾಲನಿ ಜನಗಳನ್ನು ಅಲ್ಲಿಯೇ ಉಳಿಸಿ ತಮ್ಮ ಓಟ್‌ಬ್ಯಾಂಕ್ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.

ಅಂತೆಯೇ ಮಿಮ್ಸ್‌ನ 18 ಎಕರೆ ಸ್ಥಳವನ್ನು ತಮಿಳು ಕಾಲನಿ ನಿವಾಸಿಗಳು ಸೇರಿದಂತೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸಿ ಮಿಮ್ಸ್ ಅಭಿವೃದ್ಧಿಗೆ ಸಹಕರಿಸಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕರವೇ ಮುದ್ದೇಗೌಡ, ವೆಂಕಟೇಶ್, ಸೂನಗನಹಳ್ಳಿ ಮಹೇಶ್, ಎಸ್.ಕೆ.ಶಿವರಾಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net