

ಕಾರವಾರ: ಹುಬ್ಬಳ್ಳಿ-ಗೋವಾ ನಗಡುವೆ ರಾಷ್ಟ್ರೀಯ ಹೆದ್ದಾರಿ 04 ರಲ್ಲಿ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಅನಮೋಡ ಚೆಕ್‌ಪೋಸ್ಟ್ನಲ್ಲಿ ಕೆಟಿಆರ್‌ನಿಂದ ಪ್ರವೇಶ ಶುಲ್ಕ ವಸೂಲಿಯನ್ನು ವಿರೋದಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಕುಮಾರ ಶೆಟ್ಟಿ ಬಣದ ಗೋವಾ ರಾಜ್ಯ ಘಟಕದ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಧರಣಿ ನಡೆಸಿದರು.
ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ(ಕೆಟಿಆರ್) ಪ್ರತಿಷ್ಠಾನದಿಂದ ಈ ಹಣ ಸಂಗ್ರಹ ನಡೆದಿದೆ. ಪ್ರತಿ ಲಘು ವಾಹನಕ್ಕೆ 20 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ಯಾವುದೇ ರಶೀದಿ ನೀಡುತ್ತಿಲ್ಲ. ಹಣ ಏನಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ಅಕ್ರಮ ಹಣ ವಸೂಲಿ ತಡೆಯಬೇಕು. ಆ ರೀತಿ ಹಣ ಪಡೆಯುವ ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮೂಲ-ವಲಸಿಗ ಟಾಕ್ವಾರ್ ಜೋರು
ರಾಜ್ಯ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ರಾಜೀವ್ ರಾಜನ್ ಏಪ್ರೀಲ್‌ನಲ್ಲಿ ಈ ಆದೇಶ ಹೊರಡಿಸಿದ್ದು, ಮೇ ತಿಂಗಳಿಂದ ಲಘು ವಾಹನಗಳಿಗೆ ತಲಾ 20 ಭಾರಿ ವಾಹನಗಳಿಗೆ ತಲಾ 50 ರೂ. ಶುಲ್ಕ ಆಕರಿಸಲು ಅನುಮತಿ ನೀಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇರುವ ಅಧಿಕಾರ ಬಳಸಿ ಈ ವಸೂಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದರಲ್ಲಿ ಸ್ಥಳೀಯ ವಾಹನ, ಸರ್ಕಾರಿ, ಅರೆ ಸರ್ಕಾರಿ ವಾಹನಗಳು ಹಾಗೂ ಆಂಬುಲೆನ್ಸ್ಗಳಿಗೆ ಮಾತ್ರ ರಿಯಾಯಿತಿ ನೀಡಲಾಗಿದೆ.
ಆದರೆ, ಹಣ ಪಡೆದರೆ ಸರ್ಕಾರದ ವತಿಯಿಂದ ರಶೀದಿ ನೀಡಬೇಕು. ಇಲ್ಲಿ ಬೇಕಾಬಿಟ್ಟಿ ಹಣ ಪಡೆಯುಲಾಗುತ್ತಿದೆ ಎಂದು ದೂರಿದರು. ಕರವೇ ಗೋವಾ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ನಾಟೇಕರ್, ಕಾರ್ಯದರ್ಶಿ ಶಿವಪ್ಪ ಮನಬಿನಾಳ, ವೈ.ಎಸ್.ಬಿರಾದಾರ, ಕಾರವಾರ ತಾಲೂಕು ಅಧ್ಯಕ್ಷ ಅಕ್ಷಯ ಬಿ.ಎಸ್.ಇತರರು ಪ್ರತಿಭಟನೆಯಲ್ಲಿದ್ದರು.