

ಯಾದಗಿರಿ: ಕನ್ನಡ ನಾಡು ಒಂದಾಗಲು ಆಲೂರು ವೆಂಕಟರಾಯರು ಸೇರಿದಂತೆ ಮಹಾನ್ ಕನ್ನಡಿಗರ ಅಪಾರ ಶ್ರಮ ಅಡಗಿದೆ ಈ ನಿಟ್ಟಿನಲ್ಲಿ ಅವರು ಕಟ್ಟಿಕೊಟ್ಟ ಕನ್ನಡ ನಾಡನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೆಡಗಿಮದ್ರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸಲಹೆ ನೀಡಿದರು.
ನಗರದ ಗಾಂಧಿವೃತ್ತದಲ್ಲಿನ ಪಂಪ ಮಹಾಕವಿ ಮಂಟಪದಲ್ಲಿ ಶುಕ್ರವಾರ ಸಂಜೆ ಕರವೇ ತಾಲೂಕು ಘಟಕದಿಂದ 65ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರ ಗಡಿ ನಾಡ ಹಬ್ಬ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಅವಿರತ ಹೋರಾಟ ನಡೆಸಿದ ಮಹಾನುಭಾವರ ತ್ಯಾಗದ ಪರಿಣಾಮವಾಗಿ ಇಂದು ಕನ್ನಡ ಭಾಷೆ ಶ್ರೀಮಂತವಾಗಿದೆ. ಪ್ರತಿಯೊಬ್ಬ ಕನ್ನಡಿಗ ಭಾಷೆಯನ್ನು ಪ್ರೀತಿಸುವುದು ಕಲಿಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ, ರಕ್ಷಣಾ ವೇದಿಕೆ ಗ್ರಾಮ ಘಟಕಗಳನ್ನು ರಚಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿನ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಒಬ್ಬ ಜನಪ್ರತಿನಿಧಿಗಳು ಮಾಡದ ಕೆಲಸವನ್ನು ಮಾಡುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಕರವೇ ಪಕ್ಷಾತೀತವಾಗಿ ಹೋರಾಟ ನಡೆಸುತ್ತಾ ಬರುತ್ತಿದೆ. ಇತ್ತಿಚೆಗೆ ಶೇಂಗಾ ಬೀಜದ ಕೊರತೆಯಾದಾಗ ಪಕ್ಷಾತೀತವಾಗಿ ಎಲ್ಲರಿಗೂ ಎಚ್ಚರಿಕೆ ನೀಡಿ ನಿಮ್ಮ ಮನೆಯ ಮುಂದೆ ಧರಣಿ ಮಾಡುವ ಎಚ್ಚರಿಕೆ ನೀಡಿದ ಕರವೇ ಜಿಲ್ಲಾಧ್ಯಕ್ಷರ ಸಾಮಾಜಿಕ ಕಳಕಳಿ ಮೆಚ್ಚುವಂತಹುದ್ದಾಗಿದೆ ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಸಂಘಟನೆ ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ, ಬಿಜೆಪಿ ಮಹಿಳಾ ರಾಜ್ಯ ಉಪಾದ್ಯಕ್ಷೆ ಲಲಿತಾ, ಮುಖಂಡ ದೇವೇಂದ್ರನಾಥ್ ನಾದ್, ಜಿಪಂ ಸದಸ್ಯ ಮರಲಿಂಗಪ್ಪ, ಬಸ್ಸುಗೌಡ ಬಿಳ್ಹಾರ, ಮಾಣಿಕ್ಯ ಬೀರನಕಲ್, ಅನಿಲ್ ಹೆಡಗಿಮುದ್ರಿ, ರಜನಿಕಾಂತ ಕಟ್ಟಾ, ವಿಕಾಶ ಶಿಂಧೆ, ಸುರೇಶ ಅಲ್ಲಿಪುರ, ಮಹೇಶ ಅವಂಟಿ, ನಿಂಗಪ್ಪ ಜಾಲಗಾರ, ಬಸವರಾಜ ಪಡುಕೋಟೆ, ಮಹಾವೀರ ಲಿಂಗೇರಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾದ್ಯ ದಿಮ್ಮೆ, ವೆಂಕಟೇಶ ಬೈರಿಮರಡಿ, ಅಬ್ದುಲ್ ಚಿಗಾನೂರು, ಶಿವಲಿಂಗ ಪಡಶೆಟ್ಟಿ, ಸಾಹೇಬಗೌಡ ನಾಯಕ, ಚೌಡಯ್ಯ ಬಾವೂರ, ರಾಜು ಚವ್ಹಾಣ ಭಾಗಿಯಾಗಿದ್ದರು. ಶರಣು ಗಡೇದ ನಿರೂಪಿಸಿದರು. ಸಿದ್ದು ನಾಯಕ ಹತ್ತಿಕುಣಿ ವಂದಿಸಿದರು.