ಕನ್ನಡನಾಡು ಕಟ್ಟುವ ಕಾಯಕದಲ್ಲಿದೆ ಕರವೇ

IMG-20250806-WA0126
Published on

ಅರಸೀಕೆರೆ: ಕನ್ನಡ ನಾಡು ಕಟ್ಟುವ ಕಾಯಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಮನುಕುಮಾರ್ ಹೇಳಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಭಾಷೆ, ನೆಲ, ಜಲ, ಉದ್ಯೋಗ ಸೇರಿದಂತೆ ಕನ್ನಡಿಗರಿಗೆ ಅನ್ಯಾಯವಾದ ಸನ್ನಿವೇಶದಲ್ಲಿ ಸಂಘಟನೆ ರಾಜ್ಯವ್ಯಾಪಿ ಬೀದಿಗಿಳಿದು ಹೋರಾಟ ನಡೆಸಿದೆ. ಕನ್ನಡ ನೆಲದಲ್ಲಿ ನೆಲೆಸಿರುವ ಕೆಲ ಕಿಡಿಗೇಡಿಗಳು ಕ್ಷುಲ್ಲಕ ಕಾರಣ ಮುಂದಿಟ್ಟು ತಗಾದೆ ತೆಗೆಯುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಸ್ಸಾಹಸಕ್ಕೆ ಕೈ ಹಾಕುತ್ತಿರುವುದು ಅಕ್ಷಮ್ಯ. ಭಾಷೆ, ನೆಲ, ಜಲದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ.

ನೂತನ ಪದಾಧಿಕಾರಿಗಳು ಸಂಘಟನೆಯ ಚೌಕಟ್ಟಿನಲ್ಲಿ ಸಮಾಜಮುಖಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಕನ್ನಡ ನಾಡಿನ ಹಿತ ಕಾಯಲು ಇಪ್ಪತ್ತಾರು ವರ್ಷಗಳ ಹಿಂದೆ ಟಿ.ಎ.ನಾರಾಯಣ ಗೌಡರು ಬಲಿಷ್ಠ ಸಂಘಟನೆ ಹುಟ್ಟು ಹಾಕಿದ್ದಾರೆ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದು, ರಾಜ್ಯ ದ್ರೋಹಿಗಳಿಗೆ ಹೆದರುವ ಮಾತಿಲ್ಲ. ತಾಲೂಕಿನಲ್ಲಿ ಕರವೇ ಬಲಿಷ್ಠಗೊಳಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ನೇಮಿಸಿ ಪದಗ್ರಹಣ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷರಾದ ಸೀತಾರಾಮ್, ಹೇಮಂತ್ ಕುಮಾರ್, ಕಾರ್ಯದರ್ಶಿ ರಘು ಪಾಳ್ಯ, ಗೌರವಾಧ್ಯಕ್ಷ ಲಕ್ಷ್ಮೀಶ್, ನಗರಾಧ್ಯಕ್ಷ ಎ.ಬಿ.ಸಂತೋಷ್, ರುಕ್ಮಿಣಿ ಜಯಕುಮಾರ್, ಯುವ ಘಟಕದ ಅಧ್ಯಕ್ಷ ರಕ್ಷಿತ್, ಯಲ್ಲಪ್ಪ, ಮಹೇಶ್, ಶಶಿಧರ್, ಪರಮೇಶ್,ಪೃಥ್ವಿನಾಯ್ಕಿ ಹಾಗೂ ರಾಘವೇಂದ್ರ ಐದು ಹೋಬಳಿ ಕೇಂದ್ರಗಳ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದರು. ತಾಲೂಕು ಕಾರ್ಯದರ್ಶಿ ಮಲ್ಲಿದೇವಿಹಳ್ಳಿ ಮಂಜು, ಮಂಜುನಾಥ್, ಮೂರ್ತಿ, ಲೋಕೇಶ್, ಕಮಲಮ್ಮ, ಗಂಗಾಧರ್, ಅರ್ಜುನ್ ಗೌಡ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net