ಬಂಕಾಪುರದಲ್ಲಿ ಕರವೇ ಗಜಪಡೆಯಿಂದ ರಾಜ್ಯ ಹೆದ್ದಾರಿ ತಡೆ

BNK GAJA PADE PROTEST
Published on

ಬಂಕಾಪುರ: ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ಶುಕ್ರವಾರ ಕಾರವಾರ-ಇಳಕಲ್ಲ ರಾಜ್ಯ ಹೆದ್ದಾರಿಯನ್ನು 2 ತಾಸು ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣಕ್ಕೆ ದಿನ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಆದರೆ, ಇಲ್ಲಿಯ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಶುದ್ಧ ಕುಡಿಯುವ ನೀರು, ಕುಳಿತುಕೊಳ್ಳಲು ಸುಸಜ್ಜಿತ ಆಸನಗಳು ಇಲ್ಲದಂತಾಗಿವೆ. ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಇಲ್ಲದ್ದರಿಂದ ಚಿನ್ನಾಭರಣ, ಮೊಬೈಲ್​ಫೋನ್, ಬ್ಯಾಗುಗಳು ಹಾಗೂ ಇನ್ನಿತರ ಸಾಮಗ್ರಿ ಹಾಡುಹಗಲೇ ಕಳ್ಳತನವಾಗುತ್ತಿವೆ. ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುತ್ತಾರೆ. ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ಬಸ್​ಗಳ ವ್ಯವಸ್ಥೆ ಇಲ್ಲದೆ ದಿನ ನಿತ್ಯ ಪರದಾಡುತ್ತಿದ್ದಾರೆ. ಪಟ್ಟಣದಿಂದ ಡಿಪ್ಲೊಮಾ ಕಾಲೇಜ್​ಗೆ ಹೋಗಿಬರುವವರಿಗೆ ಗುಡ್ಡದಚನ್ನಾಪುರದವರೆಗೆ, ಹಾವೇರಿ ನಗರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಬಂಕಾಪುರ, ಬೊಮ್ಮನಹಳ್ಳಿ, ಹುಲಿಕಟ್ಟಿ, ಹೋತನಹಳ್ಳಿ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ಅನಕೂಲಕ್ಕಾಗಿ ಹೆಚ್ಚುವರಿ ಬಸ್ ಸಂಚರಿಸಲು ಕ್ರಮ ಕೈಗೊಳ್ಳಬೇಕು. ಈ ಎಲ್ಲ ಸಮಸ್ಯೆಗಳನ್ನು ವಾರದೊಳಗೆ ಈಡೇರಿಸಬೇಕು ಇಲ್ಲವಾದರೆ ಬಸ್ ನಿಲ್ದಾಣದ ಆವರಣದಲ್ಲಿ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿದ ಸವಣೂರ ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡ್ರ ಹಾಗೂ ಸಾರಿಗೆ ನಿಯಂತ್ರಕ ಎಫ್.ಜಿ. ಕೆಂಚನ್ನನವರ, ಪ್ರತಿಭಟನಾ ನಿರತರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ, ಶೇಖಪ್ಪ ದೀಪಾವಳಿ, ಫಕೀರೇಶ ಕಟ್ಟಿಮನಿ, ಸುಭಾನಿ ಹಿತ್ತಲಮನಿ, ಮಾಲತೇಶ ಜಿ.ಕೆ., ಕುಮಾರ ಸುಳ್ಳನವರ, ಪವನ ವಡ್ಡರ, ಜಗದೀಶ ಮಲ್ಲಾಡ, ಆನಂದ ವಾಲ್ಮೀಕಿ, ಮಂಜುನಾಥ ನೆಲ್ಲಿಕೊಪ್ಪ, ಲಿಂಗರಾಜ ಪವಾಡಿ, ಸುನೀಲ ದೇವಸೂರ, ಮಣಿಕಂಠ ಸವೂರ, ಶರಣಪ್ಪ ಅಂಗಡಿ, ಸಿದ್ದು ಯಲಗಚ್ಚ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net