

ಕಾಗವಾಡ: ಪಟ್ಟಣದಿಂದ ಅಥಣಿಗೆ ಹೋಗುವ ಮಾರ್ಗದಲ್ಲಿ ಬಹಳಷ್ಟು ಗುಂಡಿ ಬಿದ್ದು, ರಸ್ತೆ ಹಾಳಾಗಿದೆ. ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ ಗುಂಡಿ ಮುಚ್ಚುವಂತೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುಂಡಿಗಳಿಂದ ಕೂಡಿರುವ ರಸ್ತೆಗಳಲ್ಲಿ ಸಸಿ ನೆಟ್ಟು ಶುಕ್ರವಾರ ಪ್ರತಿಭಟಿಸಿದರು.
ಕರವೇ ತಾಲೂಕು ಅಧ್ಯಕ್ಷ ಸಿದ್ದು ವಡೆಯರ ಮಾತನಾಡಿ, ಅಥಣಿಗೆ ಹೋಗುವ ರಸ್ತೆಯಲ್ಲಿ ಬಹು ದಿನಗಳಿಂದ ಗುಂಡಿ ನಿರ್ಮಾಣವಾಗಿದ್ದು, ಪ್ರತಿದಿನ ಅಪಘಾತ ಸಂಭವಿಸುತ್ತಿವೆ. ಇದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಗುಂಡಿ ಮುಚ್ಚಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ತಾಲೂಕಾಡಳಿತವೇ ಹೊಣೆಯಾಗುತ್ತದೆ ಎಂದರು.
ಬಳಿಕ ತಹಸೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು. ಉಪತಹಸೀಲ್ದಾರ್ ರಶ್ಮಿ ಜಕಾತಿ, ಕರವೇ ಉಪಾಧ್ಯಕ್ಷ ಫಾರುಕ್ ಅಲಾಸಕರ, ಗಣೇಶ ಕೋಳೆಕರ, ಪ್ರವೀಣ ಪಾಟೀಲ, ಬಾಬಾಸಾಹೇಬ ಕೊತ್ತವಾಲ, ಸಚಿನ ಗಾವಡೆ, ಅರುಣ ಜೋಶಿ, ಅಪ್ಪಾಸಾಹೇಬ ಗುಮಟೆ, ಮಹೇಶ ಮಟ್ಟಕರಿ ಇತರರಿದ್ದರು.