

ಮಂಡ್ಯ: ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಂನಿಂದ ನೀರು ಹರಿಸದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಬೆಂಬಲ ಸೂಚಿಸಿ ಕೆಲಕಾಲ ಧರಣಿ ನಡೆಸಿ ಬಳಿಕ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕಾವೇರಿ ನೀರು ನಿಯಂತ್ರಣಾ ಪ್ರಾಧಿಕಾರದ ಆದೇಶವನ್ನು ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಪಾಲಿಸಬಾರದು. ನಾಡಿನ ಜನರ ಜೀವಕ್ಕಿಂತ ಯಾವ ಆದೇಶ ದೊಡ್ಡದಾಗಲು ಹೇಗೆ ಸಾಧ್ಯ. ಆದೇಶ ಪಾಲಿಸಲು ಹೋಗಿ ಅವರು ಕೇಳಿದಷ್ಟು ನೀರನ್ನು ಇದುವರೆಗೆ ಬಿಟ್ಟಿದ್ದೇ ರಾಜ್ಯ ಸರ್ಕಾರ ದೊಡ್ಡ ತಪ್ಪು ಮಾಡಿದೆ. ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವುದನ್ನು ಬಿಟ್ಟು ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬ ದೃಢ ನಿಲುವು ತಾಳಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದ್ದು, ಈಗಾಗಲೇ 236 ತಾಲೂಕುಗಳ ಪೈಕಿ 192 ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ವಿಶೇಷವಾಗಿ ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಸ್ವರೂಪದ ಬರದ ಸ್ಥಿತಿ ನಿರ್ಮಾಣವಾಗಿದೆ. ಕೆಆರ್‌ಎಸ್ ಡ್ಯಾಂನಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ನೀರು ಮಾತ್ರ. ಅದರಲ್ಲಿ ಬಳಕೆಗೆ ಸಿಗುವುದು ಕೇವಲ 15 ಟಿಎಂಸಿ. ಇಂತಹ ಸಂದರ್ಭದಲ್ಲಿ ಪ್ರಾಧಿಕಾರ ನೀರು ಬಿಡಿ ಎಂದಿರುವುದು ಆಘಾತ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯುವ ನೀರಿಗೆ ಒಂದೂವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲಗದ್ದೆಗಳಿಗೆ ನೀರಿಲ್ಲ. ಕೈಗಾರಿಕೆಗಳಿಗೆ ಕೊಡಬೇಕಾದ ನೀರಿಲ್ಲ. ಹೀಗಿರುವಾಗ 7 ಟಿಎಂಸಿ ನೀರು ಎಲ್ಲಿಂದ ತರಲು ಸಾಧ್ಯ?. ಮಂಡ್ಯ ಭಾಗದ ರೈತರು ನೀರಿಗೆ ಏನು ಮಾಡಬೇಕು. ಬೆಂಗಳೂರಿನ ಜನರು ಕುಡಿಯುವ ನೀರು ಇಲ್ಲದೇ ಸಾಯಬೇಕೇ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಮತ್ತೆ ತ.ನಾಡಿಗೆ ನೀರು ಬಿಟ್ಟರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಅದರಿಂದ ಆಗುವ ಅನಾಹುತಗಳನ್ನು ಊಹಿಸಲೂ ಸಾಧ್ಯವಿಲ್ಲ. ರಾಜ್ಯದ ಸಂಸದರು ದೆಹಲಿಯಲ್ಲಿ ಧರಣಿ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ಅಗತ್ಯ ಬಿದ್ದರೆ ರಾಜೀನಾಮೆ ನೀಡಲೂ ಸಿದ್ಧವಾಗಿರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆ.ಟಿ.ಶಂಕರೇಗೌಡ, ಎಂ.ಎಸ್.ಚಿದಂಬರ್, ಸೌಭಾಗ್ಯ, ಕಾಮಧೇನು ರಮೇಶ್, ಸ್ವಾಮಿಗೌಡ, ಅಶೋಕ್ ಇದ್ದರು.