ಸಮಸ್ಯೆ ಪರಿಹರಿಸಲು ಕರವೇ ಮನವಿ

Published on

ಲಕ್ಷ್ಮೇಶ್ವರ: ಪುರಸಭೆಗೆ ಪಾವತಿಯಾಗುವ ತೆರಿಗೆ ಹಣವನ್ನು ಅಗತ್ಯ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ತಾಲೂಕು ಘಟಕದಿಂದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಬುಧವಾರ ಮನವಿ ಮನವಿ ಸಲ್ಲಿಸಲಾಯಿತು.

ಘಟಕದ ಅಧ್ಯಕ್ಷ ಮಹೇಶ ಕಲಘಟಗಿ ಮಾತನಾಡಿ, ಖಾಲಿ ನಿವೇಶನ, ವಾಣಿಜ್ಯ ಮಳಿಗೆ ಇತರ ಎಲ್ಲ ಮೂಲಗಳಿಂದ ತೆರಿಗೆ ಹಾಗೂ ಕರ ವಸೂಲಿ ಮಾಡುತ್ತಿದೆ. ಆದರೆ, ಆ ಹಣ ಸದ್ಬಳಕೆಯಾಗುತ್ತಿಲ್ಲ. ಖಾಲಿ ನಿವೇಶನದಲ್ಲಿ ಜಾಲಿ ಕಂಠಿ ಬೆಳೆದಿವೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ನಗರ ಸಾರಿಗೆ ಕರ ಪುರಸಭೆಗೆ ಅನ್ವಯಿಸುವುದಿಲ್ಲ. ಆದರೂ ಶೇ. 2ರಷ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಘನತ್ಯಾಜ್ಯವಿಲೇವಾರಿ ಸಮರ್ಪಕವಾಗಿಲ್ಲ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿದೆ. ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಕರ ಹೆಚ್ಚಳ ಮಾಡಿದರೂ ನೀರು ಪೂರೈಕೆ ವಿಳಂಬ ಮಾಡುವುದು ತಪ್ಪುತ್ತಿಲ್ಲ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ, ಕರ ದರ ಏರಿಕೆ ಸರ್ಕಾರದ ಆದೇಶದಂತೆ ಮಾಡಲಾಗಿರುತ್ತದೆ. ಮನವಿಯಲ್ಲಿ ನೀಡಲಾಗಿರುವ ಸಮಸ್ಯೆ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವೇದಿಕೆಯ ಕಾರ್ತಿಕ ಹಿರೇಮಠ, ಅಂಬರೀಷ ಗಾಂಜಿ, ಪ್ರವೀಣ ದಶಮನಿ, ಇಶಾಕ ಬಿಜಾಪುರ, ವಾಸು ಗೋಸಾವಿ, ಈಶ್ವರಗೌಡ ಪಾಟೀಲ್, ಶಿದಪ್ಪ ಕರಿಗೆರ, ಪ್ರಶಾಂತ ಕರಮಣ್ಣವರ, ಅರ್ಜುನ ಬಾಂಡಗೆ, ಚಂದ್ರು ಮುಳಗುಂದ, ಬಸನಗೌಡ ಮನ್ನಂಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net