

ಮಂಡ್ಯ: ಕೇಂದ್ರ ಸರ್ಕಾರದ ಬಲವಂತದ ಹಿಂದಿ ಏರಿಕೆಯನ್ನು ಖಂಡಿಸಿ ಹೋರಾಟ ಮಾಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಬಂಧನ ಖಂಡಿಸಿ ಹಾಗೂ ಬಿಡುಗಡೆಗೆ ಆಗ್ರಹಿಸಿ ನಗರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಉತ್ತರ ಭಾರತದ ಅನೇಕ ಸಂಸದರು ಕಾರ್ಯಕ್ರಮ ಏರ್ಪಡಿಸಿ ನಾಡಿನ ಕೇಂದ್ರ ಕಚೇರಿಗಳಲ್ಲಿ ಹಿಂದಿ ಏರಿಕೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದನ್ನು ತಿಳಿದ ನೂರಾರು ಕರವೇ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಕಾರ್ಯಕ್ರಮವನ್ನು ರದ್ದುಗೊಳಿಸಲು ಆಗ್ರಹಿಸಿ ಬಲವಂತದ ಹಿಂದಿ ಏರಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಪ್ರತಿಭಟಿಸಿದ ಸಂದರ್ಭದಲ್ಲಿ ಪೊಲೀಸರು ಕರವೇ ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದು ನಂತರ ಅವರನ್ನು ಬಂಧಿಸಿ ಕರೆದೊಯ್ಯಲಾಗಿದೆ. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಈ ಕ್ರಮವನ್ನು ಖಂಡನೀಯ. ಕೂಡಲೇ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಮಾತನಾಡಿ, ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡಲು ಮುಂದಾಗಿದೆ. ಈ ನಡೆಯನ್ನ ಕೈ ಬಿಡಬೇಕು. ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ವಂಚಿತರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಹಿಂದಿಗರು ಮತ್ತು ಪರಭಾಷಿಕರ ಹಾವಳಿ ಹೆಚ್ಚಾಗಿದೆ. ಕನ್ನಡಿಗರಿಗೆ ನ್ಯಾಯ ಸಿಗಬೇಕು. ಕೇಂದ್ರ ಸರ್ಕಾರ ಬಲವಂತದ ಹಿಂದಿ ಹೇರಿಕೆ ವಿಚಾರವಾಗಿ ಮುಂದಿನ ದಿನಗಳಲ್ಲಿ ದೇಶದ 17ಕ್ಕೂ ಹೆಚ್ಚು ರಾಜ್ಯದ ಮುಖಂಡರು ಸೇರಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಭೆ ನಡೆಸಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಮೇಲೆ ಗಧಾ ಪ್ರಹಾರ ನಡೆಸಿ ಹಿಂದಿಹೇರಿಕೆ ಮಾಡುತ್ತಿರುವುದನ್ನು ವಿರೋಧಿಸಲಾಗುವುದು. ಅಂತೆಯೇ ಪ್ರತಿಭಟನೆ ವೇಳೆ ಬಂಧಿತರಾಗಿರುವ 42ಕ್ಕೂ ಹೆಚ್ಚು ಕಾರ್ಯಕರ್ತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಎಂ.ಎಸ್.ಚಿದಂಬರ್, ಕೆ.ಟಿ.ಶಂಕರೇಗೌಡ, ಕಾಂತರಾಜು, ಸ್ವಾಮಿ, ವರದೇಗೌಡ, ಸುಜಾತಾ ಕೃಷ್ಣ, ಶೋಭಾ, ಶಶಿಮಣಿ, ಜ್ಯೋತಿ, ಪುಟ್ಟ ಗೌರಮ್ಮ ಇತರರಿದ್ದರು.