ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ನಗರದಲ್ಲಿ ಕರವೇ ಮೌನ ಪ್ರತಿಭಟನೆ

Karave activists protest Mandya
Published on

ಮಂಡ್ಯ: ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ಶಿವಸೇನೆ, ಎಂಇಎಸ್ ಮತ್ತು ಮರಾಠಿಗರು ನಡೆಸಿದ ದೌರ್ಜನ್ಯ ಖಂಡಿಸಿ ಕರವೇ ಕಾರ್ಯಕರ್ತರು ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಜಿಲ್ಲಾ ಎಸ್ಪಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕಾವೇರಿ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ಶಿವಸೇನೆ, ಎಂಇಎಸ್ ಮತ್ತು ಮರಾಠಿಗರು ನಿರಂತರವಾಗಿ ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡುತ್ತಿದ್ದಾರೆ. ಆದರೂ ಕರ್ನಾಟಕ ಸರ್ಕಾರ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಬದಲು ಕನ್ನಡಿಗರ ಮೇಲೆಯೇ ಪ್ರಕರಣ ದಾಖಲು ಮಾಡುತ್ತಾ, ನಾವು ಮರಾಠಿಗರ ಪಕ್ಷಪಾತಿಗಳು ಎಂಬ ಸಂದೇಶವನ್ನು ಕನ್ನಡಿಗರಿಗೆ ನೀಡುತ್ತಿದೆ. ಇದು ಕನ್ನಡಿಗರ ತಾಳ್ಮೆಯನ್ನು ಕೆಣಕುತ್ತಿದ್ದಾರೆ. ಮಾತ್ರವಲ್ಲದೆ ಕನ್ನಡಿಗರಿಗೆ ಮಾಡುವ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ನಾಡಿನ ಸಂಪನ್ಮೂಲದಿಂದ ತಿಂದು ತೇಗುತ್ತಿರುವ ಇಂತಹ ನಾಡದ್ರೋಹಿಗಳ ಪರ ನಿಂತಿರುವ ರಾಜ್ಯ ಸರ್ಕಾರ ನಡೆ ಸರಿಯಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶೀಘ್ರವೇ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕನ್ನಡಿಗರ ಮೇಲಿನ ಪ್ರಕರಣ ಹಿಂಪಡೆದು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡುತ್ತಿರುವ ನಾಡ ದ್ರೋಹಿಗಳ ವಿರುದ್ಧ ಪ್ರಕರಣವನ್ನು ದಾಖಲು ಮಾಡಬೇಕು. ನಾವು ಬಾಯಿಗೆ ಕಟ್ಟಿರುವ ಕಪ್ಪು ಪಟ್ಟಿಯು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದು, ಕನ್ನಡಿಗರ ಧ್ವನಿಯನ್ನು ಕರ್ನಾಟಕ ಸರ್ಕಾರವೇ ಆಡಗಿಸುತ್ತಿದೆ ಎಂಬ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇವೆ ಎಂದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಗಡಿ ಭಾಗದ ಕನ್ನಡಿಗರ ಮೇಲೆ ನಿರಂತರವಾಗಿ ಮರಾಠಿಗರು ದೌರ್ಜನ್ಯ ಮಾಡುತ್ತಿದ್ದಾರೆ. ನೌಕರರ ಮೇಲೆ ಸುಳ್ಳು ದೂರು ನೀಡುವ ಮೂಲಕ ಪೋಕ್ಸೋ ಪ್ರಕರಣವನ್ನು ದಾಖಲು ಮಾಡುವಂತೆ ಮರಾಠಿಗ ಸಂಘಟನೆಗಳು ನೋಡಿಕೊಳ್ಳುತ್ತಿದ್ದು, ಪ್ರಕರಣ ಕುರಿತು ಸಮಗ್ರ ತನಿಖೆಯನ್ನು ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮವನ್ನು ಕೈಗೊಂಡು, ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಕನ್ನಡಿಗರೇ ರಾಜ್ಯ ಸರ್ಕಾರಕ್ಕೆ ಬುದ್ಧಿ ಕಲಿಸುತ್ತಾರೆ ಎಂಬ ಎಚ್ಚರಿಕೆ ನೀಡಿದರು.

ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕ ಸಾರ್ವಜನಿಕವಾಗಿ ಹೇಗೆ ಹೆಣ್ಣು ಮಗುವಿನ ಮೇಲೆ ದೌರ್ಜನ್ಯ ಮಾಡಲು ಸಾಧ್ಯ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಮರಾಠಿ ಸಂಘಗಳು ಕನ್ನಡಿಗರ ಧ್ವನಿಯನ್ನು ಮತ್ತು ಕನ್ನಡ ನೌಕರರನ್ನು ಬಲಿಪಶು ಮಾಡುವ ಹುನ್ನಾರದಿಂದ ಇಂತಹ ಪ್ರಕರಣವನ್ನು ದಾಖಲು ಮಾಡುತ್ತಿದ್ದಾರೆ. ಕನ್ನಡ ನೌಕರರು ಇವರ ಮುಂದೆ ತೆರೆ ಎತ್ತಿ ಗೌರವಯುತ ಜೀವನ ನಡೆಸಲು ಬಿಡುತ್ತಿಲ್ಲ. ಇಂತಹ ಪ್ರಕರಣಗಳ ಸತ್ಯಾಸತ್ಯತೆಯನ್ನು ತಿಳಿದು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕಾರ್ಯಕರ್ತರಾದ ಚೇತನ್‌ಕುಮಾರ್, ಎನ್.ಶ್ರೀನಿವಾಸ್, ಆರ್.ಶಂಕರ್, ಸಿದ್ದರಾಜು, ಥಾಮಸ್ ಬೆಂಜಮಿನ್, ಎಲ್.ಸಂದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net