

ಶಿವಮೊಗ್ಗ: ಮರಾಠ ಅಭಿವೃದ್ಧಿ ನಿಗಮ, ಸಿಗಂದೂರು ದೇವಾಲಯದ ಸಲಹಾ ಹಾಗೂ ಮೇಲುಸ್ತುವಾರಿ ಸಮಿತಿ ರದ್ದುಪಡಿಸುವಂತೆ ಒತ್ತಾಯಿಸಿ ಕರವೇ (ಎಚ್.ಶಿವರಾಮೇಗೌಡರ ಬಣ) ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿ ಕನ್ನಡಿಗರಿಗೆ ದ್ರೋಹ ಮಾಡಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಗಡಿಯ ಗೊಂದಲ ಇರುವ ಸಮಯದಲ್ಲಿ ರಾಜ್ಯ ಸರ್ಕಾರ ನಿಗಮ ಘೊಷಣೆ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ದೀಪಾವಳಿ ಉಡುಗೊರೆ ನೀಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಲಹಾ ಹಾಗೂ ಮೇಲುಸ್ತುವಾರಿ ಸಮಿತಿ ರಚಿಸಿರುವುದು ಸರಿಯಲ್ಲ. ಧರ್ಮದರ್ಶಿ ರಾಮಪ್ಪನವರ ನೇತೃತ್ವದಲ್ಲೇ ದೇವಸ್ಥಾನದ ದೈನಂದಿನ ಚಟುವಟಿಕೆಗಳು ನಡೆಯಬೇಕೆಂದು ಒತ್ತಾಯಿಸಿದರು.
ಕರವೇ (ಎಚ್.ಶಿವರಾಮೇಗೌಡರ ಬಣ) ಜಿಲ್ಲಾಧ್ಯಕ್ಷ ಶಿವಣ್ಣ ಸೂಡೂರು, ಪ್ರಮುಖರಾದ ರಂಜಿತ್ ಪುರದಾಳು, ಮಂಜಪ್ಪ ಮಂಡಘಟ್ಟ, ಪ್ರಕಾಶ್, ವಿಜಯಗೌಳಿ, ಮಹೇಶ್, ಶಿವಪ್ರಕಾಶ್, ಪ್ರದೀಪ್, ವಾಸಿಂ ಉಳ್ಳೂರು, ಮಂಜುನಾಥ, ಮೋಹನ್, ಅರುಣ್, ಪ್ರವೀಣ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.