

ಕುಶಾಲನಗರ:
ಕೊಡಗಿನ ಅಸ್ಮಿತೆಯ ಅಳಿವು ಉಳಿವಿನ ಪ್ರಶ್ನೆಯಾಗಿರುವ ಕೊಡಗು ವಿಶ್ವವಿದ್ಯಾಲಯದ ವಿಲೀನ ಮಾಡುವಂಥ ಚಿಂತನೆ ಕೊಡಗು ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಂಡತಾಗುತ್ತದೆ, ಹಾಗೇನಾದರೂ ಈ ಸರ್ಕಾರ ವಿಲೀನವಾಗಿಸಲು ಮುಂದಾದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾರಿ ಎಚ್ಚರಿಸಿದ್ದಾರೆ..
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರ ಮಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ವಿಲೀನ ಮಾಡಿ, ಕೊಡಗು ಭಾಗದ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಇಲ್ಲಿನ ಕಾಲೇಜಿನ ನಿರ್ವಹಣೆಗಾಗಿ ಎರಡು ಕೋಟಿ ರೂ. ಹಣವನ್ನು ಮೀಸಲಿಡುವುದರಿಂದ, ಮಂಗಳೂರು ವಿಶ್ವವಿದ್ಯಾನಿಲಯದ ಈಗಿನ ಆರ್ಥಿಕ ಪರಿಸ್ಥಿತಿಯ ಸಂದರ್ಭದಲ್ಲಿ ಯಾವ ಬಗೆಯ ಪ್ರೋತ್ಸಾಹ ದೊರೆಯಬಹುದು ಆಲೋಚನೆ ಮಾಡಬೇಕಾಗುತ್ತದೆ. ಅದೇ ಸರ್ಕಾರದಿಂದ ಆ ಎರಡು ಕೋಟಿ ರೂ. ಹಣವನ್ನು ಕೊಡಗು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನೀಡಿದರೆ ಈಗಿನ ಬೆಳವಣಿಗೆಯ ಜತೆಗೆ ಉತ್ತಮ ನಿರ್ವಹಣೆ ಹೊಂದಲು ಮತ್ತಷ್ಟು ಪೂರಕವಾಗಿರುತ್ತದೆ.
ಸ್ವತಂತ್ರ ನಿರ್ವಹಣೆಗೆ ಅವಕಾಶ ಇರುವಾಗ ವಿಲೀನವಾಗಿಸುವ ಮೂಲಕ ಅಧೀನಕ್ಕೊಳಪಡಿಸಲು ಮುಂದಾಗುತ್ತಿರುವುದು ಯಾಕೆ? ಇದರಿಂದ ಈ ಭಾಗದ ಮಕ್ಕಳಿಗೆ ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಡಂತೆ ಆಗುವುದಿಲ್ಲವೆ? ಇದು ನಿಜವಾಗಿಯೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಸಂವಿಧಾನದ ಹಕ್ಕುಗಳಲ್ಲೊಂದು. ಅಂತಹ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗುತ್ತಿರುವುದು ಸರಿಯಾದುದ್ದಲ್ಲ.
ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು ಎಂದು ಸೂಚಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.