

ಶಿರಸಿ: ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಮೇ 16ರಿಂದ ಜಾರಿಗೆ ಬರುವಂತೆ ಜಿಲ್ಲೆಯ 2 ನಗರಗಳನ್ನು ಹಾಗೂ 19 ಗ್ರಾಮ ಪಂಚಾಯಿತಿಗಳನ್ನು ಕಂಟೇನ್ಮೆಂಟ್ ಜೋನ್ಗಳನ್ನಾಗಿ ಘೊಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಯಾ ತಾಲೂಕುಗಳಲ್ಲಿ ಪರೀಕ್ಷೆಗೊಳಪಟ್ಟವರಲ್ಲಿ ಶೇ. 50ಕ್ಕಿಂತ ಜಾಸ್ತಿ ಕೋವಿಡ್ ಪ್ರಕರಣಗಳು ಕಂಡು ಬಂದಿರುವ ನಗರಗಳು ಹಾಗೂ ಗ್ರಾಮ ಪಂಚಾಯಿತಿಗಳು ಕಂಟೇ ನ್ಮೆಂಟ್ ಜೋನ್ಗಳನ್ನಾಗಿ ಘೊಷಣೆ ಮಾಡಲಾಗಿದೆ. ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳು ವಿಶೇಷ ಕಂಟೇನ್ಮೆಂಟ್ ವಲಯಗಳಾಗಿ ಗುರುತಿಸಿದ್ದು, ಸೋಂಕು ತಡೆಗೆ ಈ ಕ್ರಮ ಅನಿವಾರ್ಯವಾಗಿದೆ. ಕಾರವಾರ ಹಾಗೂ ದಾಂಡೇಲಿ ನಗರಗಳು, ಗ್ರಾಮ ಪಂಚಾಯಿತಿಗಳಾದ ಚಿತ್ತಾಕುಲ, ಮಲ್ಲಾಪುರ, ಬೊಬ್ರುವಾಡ, ಹಿಲ್ಲೂರು, ರ್ಕ, ಶಿರಾಲಿ, ಬನವಾಸಿ, ಅಣಲೇಬೈಲ್, ಮನಮನೆ, ಕೋಲಸಿರ್ಸಿ, ಮಾವಿನಮನೆ, ಉಮ್ಮಚಗಿ, ನಂದೊಳ್ಳಿ, ಇಂದೂರು, ರಾಮನಗರ, ಅಖೇತಿ, ಅಂಬಿಕಾನಗರ, ಅಂಬೇವಾಡಿ, ಮುರ್ಕವಾಡ ಈ ಪಟ್ಟಿಯಲ್ಲಿವೆ ಎಂದರು.
ಈ ಕಂಟೇನ್ಮೆಂಟ್ ವಲಯಗಳಲ್ಲಿ ಮೇ 16ರ ಬೆಳಗ್ಗೆ 10 ಗಂಟೆ ನಂತರ ಜನರಿಗೆ ಸಂಚರಿಸಲು ಅವಕಾಶವಿಲ್ಲ. ತಳ್ಳು ಗಾಡಿಗಳ ಮೂಲಕ ಜನರಿಗೆ ದಿನಸಿ ವಸ್ತುಗಳ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಜನತೆ ಈ ವ್ಯವಸ್ಥೆಗೆ ಸಹಕರಿಸಬೇಕು ಎಂದರು.
ಎರಡನೇ ಹಂತದ ಲಸಿಕೆಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅವುಗಳ ಪೂರೈಕೆ ಆಗಲಿದೆ. ಜತೆಗೆ ಎರಡನೇ ಹಂತದ ಲಸಿಕೆಯನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ನೀಡಲು ಡಿಎಚ್ಒಗೆ ಸೂಚಿಸಲಾಗಿದೆ ಎಂದ ಅವರು, ಆಮ್ಲಜನಕ ಪ್ರಮಾಣವೂ ಸಾಕಷ್ಟಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ಕಳೆದ ಬಾರಿ ಕರೊನಾ ಹಿನ್ನೆಲೆಯಲ್ಲಿ ಕಾರ್ವಿುಕರಿಗೆ ಎಲ್ಲ ಮೂಲಗಳಿಂದ 1120 ಕೋಟಿ ರೂ. ಪರಿಹಾರ ಧನ ನೀಡಲಾಗಿದೆ. ಈ ವರ್ಷ ಕೂಡ ಸೂಕ್ತ ಪರಿಹಾರ ನೀಡುವ ಸಂಬಂಧ ಮುಖ್ಯಮಂತ್ರಿ ಜತೆಗೆ ರ್ಚಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಡಿಎಸ್ಪಿ ರವಿ ನಾಯ್ಕ, ಪೌರಾಯುಕ್ತ ರಮೇಶ ನಾಯಕ, ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಇದ್ದರು.
ಮದುವೆಗೆ ಇನ್ಮುಂದೆ 20 ಜನರಿಗಷ್ಟೇ ಅವಕಾಶ: ಮದುವೆ ಸಮಾರಂಭಗಳಿಂದ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಮದುವೆಗಳಿಗೆ ಅವಕಾಶ ನೀಡುವುದಿಲ್ಲ. ಈಗಾಗಲೇ ಅನುಮತಿ ಪಡೆದಿರುವ ಮದುವೆಗಳಿಗೆ ಕೇವಲ 20 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿದ್ದಾರೆಯೇ ಎಂಬುದನ್ನು ಆಯಾ ಗ್ರಾಮ ಲೆಕ್ಕಿಗರು ಮತ್ತು ಪಿಡಿಒಗಳು ಸ್ಥಳಕ್ಕೆ ಭೇಟಿ ನೀಡಿ ಚಿತ್ರೀಕರಣದ ಮೂಲಕ ಖಚಿತಪಡಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.