

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಮಿಡ್ ಟೌನ್ ಸಂಯುಕ್ತವಾಗಿ ಮೇ 1ರಿಂದ 3ರ ವರೆಗೆ ನಗರದ ಹೊಸ ಕೋರ್ಟ್ ಹಿಂಭಾಗದಲ್ಲಿರುವ ಕಲ್ಲೂರ ಲೇಔಟ್ ಮೈದಾನದಲ್ಲಿ ಕರಾವಳಿ ಉತ್ಸವ ವಾಣಿಜ್ಯ ಮಳಿಗೆಗಳುಳ್ಳ ಪ್ರದರ್ಶನೋತ್ಸವ ಏರ್ಪಡಿಸಲಾಗಿದೆ.
ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ ಅವರು ಮೇ 1ರಂದು ಸಂಜೆ 5ಕ್ಕೆ ಉತ್ಸವ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಮಹಾಪೌರ ರಾಮಪ್ಪ ಬಡಿಗೇರ, ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇತರರು ಭಾಗವಹಿಸಲಿದ್ದಾರೆ.
ಉತ್ಸವದಲ್ಲಿ ಆಹಾರ ಮಳಿಗೆ, ಸಿದ್ಧ ಉಡುಪು ಹಾಗೂ ಗಹೋಪಯೋಗಿ ವಸ್ತುಗಳು ಅಲ್ಲದೇ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿರಲಿವೆ.
ಕರಾವಳಿ ಉತ್ಸವದಲ್ಲಿ ಮೇ 1ರಂದು ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರಿಂದ ಮಂದಾರ್ತಿ ಮಹಾತ್ಮೆ ನೃತ್ಯರೂಪಕ, ಮೇ 2ರಂದು ಆಳ್ವಾಸ್ ಮೂಡಬಿದಿರೆ ಇವರಿಂದ ನರ ಶಾರ್ದೂಲ ಯಕ್ಷಗಾನ, ಮೇ 3ರಂದು ಕುದ್ರೋಳಿ ಗಣೇಶ ಅವರಿಂದ ವಿಸ್ಮಯ ಜಾದೂ ಹಾಗೂ ಪಿಲಿ ಡ್ಯಾನ್ಸ್, ಚೆಂಡೆ ಮೇಳ ಹಮ್ಮಿಕೊಳ್ಳಲಾಗಿದೆ.
ಕರಾವಳಿ ಉತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ ಎಂದು ರೋಟರಿ ಕ್ಲಬ್‌ನ ದಿನೇಶ ಶೆಟ್ಟಿ, ಪ್ರವಿಣ ಬನ್ಸಾಲಿ, ಶಿಲ್ಪಾ ಶೆಟ್ಟಿ, ಶೈಲಜಾ ಬಾಡಗೆ ಇತರರು ತಿಳಿಸಿದ್ದಾರೆ.