

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಕರವಲೆ ಭಗವತಿ ಮಹಿಷಮರ್ಧಿನಿ ದೇವಾಲಯ ಸಮಿತಿ ಪ್ರಸಕ್ತ ಸಾಲಿನಲ್ಲಿ ಸುಮಾರು ೧೮ ಲಕ್ಷ ವೆಚ್ಚದಲ್ಲಿ ದಸರಾ ಜನೋತ್ಸವಕ್ಕೆ ಸಿದ್ಧತೆ ನಡೆಸಿದೆ.
೨೭ನೇ ವರ್ಷದ ಆಚರಣೆಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಉದಿಯಂಡ ನೀರಜ್ ಬೋಪಣ್ಣ ವಹಿಸಿದ್ದರೆ, ಉಪಾಧ್ಯಕ್ಷರಾಗಿ ಚಂಗಪ್ಪ, ಕಾರ್ಯದರ್ಶಿ ಪವನ್, ಖಜಾಂಚಿ ಕಾರ್ಯಪ್ಪ ಹಾಗೂ ೨೫೦-೩೫೦ ಸದಸ್ಯರು ಕಾರ್ಯನಿರತರಾಗಿದ್ದಾರೆ. ಮಂಟಪ, ಲೈಟಿಂಗ್ಸ್, ಪ್ರದರ್ಶನ ಆಕರ್ಷಣಿಯವಾಗಲಿದೆ.
೨೭ನೇ ವರ್ಷದ ಆಚರಣೆಯಲ್ಲಿ ’ಗಣಪತಿಯಿಂದ ಗಜಾಸುರನ ವಧೆ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ತಮಿಳುನಾಡಿನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಪ್ಲಾಟ್ ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್‌ನ್ನು ಮಡಿಕೇರಿಯ ಶೋಮ್ಯಾನ್- ಕ್ರಿಯೇಷನ್ಸ್ ಹಾಗೂ ಬಿಪಿನ್ ಆಂಥೋನಿ ತಂಡ ಮಾಡಲಿದೆ. ಧ್ವನಿವರ್ಧಕವನ್ನು ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಒದಗಿಸಲಿದ್ದು, ಸ್ಟುಡಿಯೋ ಲೈಟ್ಸ್‌ನ್ನು ಮಡಿಕೇರಿಯ ಸ್ಕಂದ ಲೈಟ್ಸ್ ತಂಡ ಅಳವಡಿಸಲಿದೆ.
೨೧ ಕಲಾಕೃತಿ: ೨೧ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಕಲಾವಿದರಾದ ಸ್ಪರ್ಶ ಆಟ್ಸ್ ಮತ್ತು ಸತ್ಯಶ್ರೀ ದಯಾ ಮಂಗಳೂರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡಲಿದ್ದಾರೆ.
೧ ಕೋಟಿಯಲ್ಲಿ ಜೀರ್ಣೋದ್ಧಾರ: ೨೦೧೮ರಲ್ಲಿ ಸುಮಾರು ೧ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಮಾ೧೬ಕ್ಕೆ ವಾರ್ಷಿಕೋತ್ಸವ ಮಾಡಲಾಗುತ್ತದೆ. ಈ ಸಂದರ್ಭ ದೇವಿಯು ವಿಗ್ರಹವನ್ನು ಆರ್ಚಕರು ತಲೆಯ ಮೇಲೆ ಹೊತ್ತು ನಾಡಿನವರ ದುಡಿಕೊಟ್ಟ್ ಪಾಟ್ ಹಾಗೂ ಚೆಂಡೆಯೊಂದಿಗೆ ಪ್ರದಕ್ಷಿಣೆ ಬರುತ್ತಾರೆ. ಮಾರನೆಯ ದಿನ ನಾಡಿನ ಭಕ್ತಾದಿಗಳಿಂದ ಎತ್ತು ಪೋರಾಟದೊಂದಿಗೆ ದೊಡ್ಡ ಹಬ್ಬ ಪ್ರಾರಂಭವಾಗುತ್ತದೆ. ನಂತರ ರಾತ್ರಿ ವಿಷ್ಣುಮೂರ್ತಿ ಕೋಲ ನಡೆಯುತ್ತದೆ. ಈ ಸ್ಥಳದ ವಿಶೇಷವೆಂದರೆ ಭಗವತಿ ದೇವಿ ಗಾಳೀಬಿಡುವಿನಿಂದ ಬಂದ ಕಾರಣ ಭಗವತಿ ಆದಿ ಸ್ಥಳದಿಂದ ಹರದು ಬರುವಂತಹ ನೀರಿನಿಂದಲೇ ತಾಯಿಯ ಜಳಕವಾಗಬೇಕೆಂಬುದು ಪ್ರತೀತಿಯಿದೆ.
ಮಡಿಕೇರಿಯ ಜನರಿಗೆ ಆದಿ ದೇವತೆ. ಭಕ್ತಾದಿಗಳು ಕೆಲವು ಸಮಸ್ಯೆ ಈಡೇರಿಸಲು ಪ್ರಶ್ನೆ ಮಾಡಿದ ಸಂದರ್ಭ ಈ ದೇವಾಲಯಕ್ಕೆ ದರ್ಶನ ಮಾಡಲು ಹೇಳುತ್ತಾರೆ. ದೇವಾಲಯಕ್ಕೆ ಹೆಚ್ಚಾಗಿ ಮಕ್ಕಳಭಾಗ್ಯ ಹಾಗು ಮದುವೆ ಆಗುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ.-ಮುದ್ದಂಡ ರಾಯ್ ತಮ್ಮಯ್ಯ, ಕಾರ್ಯದರ್ಶಿ, ಜೀಣೋದ್ಧಾರ ಸಮಿತಿಒಟ್ಟು ೧೮ ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಜನಾಕರ್ಷಣೆಯೊಂದಿಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡಲಾಗುವುದು.-ಉದಿಯಂಡ ನೀರಜ್ ಬೋಪಣ್ಣ, ಅಧ್ಯಕ್ಷರು, ಕರವಲೆ ಭಗವತಿ ಮಹಿಷಮರ್ಧಿನಿ ದೇವಾಲಯ ಸಮಿತಿ