

ಕಾರಟಗಿ : ವಾಲ್ಮೀಕಿ ಸಮುದಾಯದ ನಾಯಕ ಬಿ.ಶ್ರೀರಾಮುಲು ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಶಾಸಕ ಜನಾರ್ದನ ರೆಡ್ಡಿಗೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮುದಾಯ ತಕ್ಕಪಾಠ ಕಲಿಸಲಿದೆ ಎಂದು ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಜನಾರ್ದನ ರೆಡ್ಡಿ , ದೇಶದ ಕಾನೂನು ಏನು ಮಾಡುತ್ತದೆ ಎಂಬ ಹೇಳಿಕೆ ನೀಡಿದ್ದರು. ಇಂಥವರು ಈಗ ಸಮುದಾಯದ ನಾಯಕನ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೆಡ್ಡಿ ಎಲ್ಲಿ ಚುನಾವಣೆಗೆ ನಿಂತರು ಅವರಿಗೆ ಸಮುದಾಯ ಬುದ್ಧಿ ಕಲಿಸುತ್ತದೆ ಎಂದು ಕಿಡಿ ಕಾರಿದರು.
ಬದಾಮಿ ಕ್ಷೇತ್ರದಲ್ಲಿ ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ರಾಮುಲುರನ್ನು ಕಣಕ್ಕಿಳಿಸಿದ ವೇಳೆ ಬಿಜೆಪಿಗರಿಗೆ ಮತ್ತೊಬ್ಬ ನಾಯಕ ದೊರೆಯಲಿಲ್ಲವೇ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡ್ತೀವಿ ಎಂದು ಬಿಜೆಪಿ ಕೈಕೊಟ್ಟಿತು. ಈಗ ರಾಜ್ಯ ಉಸ್ತುವಾರಿ ರಾಧ ಮೋಹನ್ ದಾಸ್ ಸಣ್ಣತನ ಮೆರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಅಶೋಕ್ ಸೇರಿ ಇತರ ನಾಯಕರು ರಾಮುಲು ಬೆಂಬಲಕ್ಕೆ ಬಾರದಿರುವುದು ಖೇಧಕರ ಸಂಗತಿ. ರಾಮುಲುರನ್ನು ಗೂಂಡಾ ಎಂದಿರುವುದು ನೋವು ತಂದಿದೆ. ಸಮುದಾಯದ ಬಳಕೆ ವಸ್ತುವಲ್ಲ ಎಂದು ಎಚ್ಚರಿಸಿದರು.
ವಾಲ್ಮೀಕಿ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಸೋಮನಾಥ ಹೆಬ್ಬಡದ ಹಾಗೂ ಮುಖಂಡ ಶಿವರಡ್ಡಿ ನಾಯಕ ಮಾತನಾಡಿ, ರೆಡ್ಡಿ ಒಬ್ಬರ ಬಗ್ಗೆ ಛಾಡಿ ಹೇಳುವ ಕೆಲಸ ಬಿಡಬೇಕು. ಗಂಗಾವತಿಯಲ್ಲಿ ಶ್ರೀರಾಮುಲು ಸ್ನೇಹಿತ ಎಂಬ ಕಾರಣಕ್ಕೆ ನಮ್ಮ ಸಮುದಾಯ ರೆಡ್ಡಿ ಬೆಂಬಲಕ್ಕೆ ನಿಂತಿತು. ಶೀಘ್ರವೇ ರೆಡ್ಡಿ ಹೇಳಿಕೆಗಳಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೆಡ್ಡಿ ಮನೆಗೆ ಮುತ್ತಿಗೆ ಹಾಕಲಾಗುವುದು. ಸಂಡೂರು ಉಪ ಚುನಾವಣೆ ಸೋಲಿಗೆ ಶ್ರೀರಾಮುಲು ಕಾರಣವಾದರೆ, ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹೊಣೆ ಹೊರಬೇಕು ಎಂದರು.
ಸಮುದಾಯದ ಮುಖಂಡರಾದ ಗದ್ದೆಪ್ಪ ನಾಯಕ, ತಿಪ್ಪಣ್ಣ, ಹನುಮಂತಪ್ಪ ಬನ್ನಿಕಟ್ಟಿ, ಸುಂಕ್ಲಯ್ಯ, ಬಸವರಾಜ್ ಸಿದ್ದಾಪುರ, ಛತ್ರಪ್ಪ ಸಿಂಗನಾಳ, ವೀರೇಶ ನಾಯಕ, ದುರುಗೇಶ್ ಪ್ಯಾಟ್ಯಾಳ, ಹನುಮೇಶ ಗುರಿಕಾರ, ರಮೇಶ್ ನಾಯಕ, ಸೋಮಶೇಖರ್ ಗ್ಯಾರೇಜ್, ಫಕೀರಪ್ಪ, ಮೂಕಪ್ಪ, ಕೆಂಚಪ್ಪ ವಕೀಲ, ರಮೇಶ, ದೇವರಾಜ್ ಜೂರಟಗಿ, ಲೀಲಾಧರ್ ನಾಯಕ, ಬಸವರಾಜ್ ಸೋಮನಾಳ, ನಾಗಪ್ಪ ದೇವಿಪುರ, ಹನುಮಂತಪ್ಪ ಸೇರಿ ಇತರರಿದ್ದರು.