ಅಂಬೇಡ್ಕರ್ ಭಾವಚಿತ್ರ ಅಪಮಾನಕ್ಕೆ ಆಕ್ರೋಶ

16032020 Karatagi Chalvadi mahasabha appele
Published on

ತಾಲೂಕು ಛಲವಾದಿ ಮಹಾಸಭಾದಿಂದ ತಹಸೀಲ್ದಾರ್ ಆರ್. ಕವಿತಾಗೆ ಮನವಿ

ಕಾರಟಗಿ: ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ನಡೆಸಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅಪಮಾನಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾಲೂಕು ಛಲವಾದಿ ಮಹಾಸಭಾ ಒತ್ತಾಯಿಸಿ, ತಹಸೀಲ್ದಾರ್ ಆರ್.ಕವಿತಾಗೆ ಸೋಮವಾರ ಮನವಿ ಸಲ್ಲಿಸಿತು.

ಘಟನೆಗೆ ಕಾರಣವಾದ ಗ್ರಾಪಂ ಅಧ್ಯಕ್ಷ ಹಂಜಿಗಾಲಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಧ್ಯಕ್ಷ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬೇಕು. ದೌರ್ಜನ್ಯಕ್ಕೊಳಗಾದ ದಲಿತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಮುನಿರಾಬಾದ್ ಪಿಎಸ್‌ಐ ಮತ್ತು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಹಾಗೂ ಜಾತಿ ತಾರತಮ್ಯ ಪ್ರಕರಣ ತಡೆಯುವಲ್ಲಿ ವಿಫಲವಾದ ತಾಲೂಕು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಅಮಾನತು ಮಾಡಬೇಕು. ದೌರ್ಜನ್ಯ ನಡೆಸಿದ ಸವರ್ಣೀಯರ ವಾರ್ಡ್‌ಗಳಿಗೆ ಮಾತ್ರ ಭೇಟಿ ನೀಡಿ, ದಲಿತರ ವಾರ್ಡ್‌ಗೆ ಭೇಟಿ ನೀಡದ ಜಿಪಂ ಸದಸ್ಯ ರಾಜಶೇಖರ ಹಿಟ್ನಾಳ ನೈತಿಕ ಹೊಣೆ ಹೊತ್ತು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೌರ್ಜನ್ಯಕ್ಕೊಳಗಾದ ಪ್ರತಿ ದಲಿತರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಹಾಸಭಾದ ಪದಾಧಿಕಾರಿಗಳಾದ ನಾಗರಾಜ ವಾಲಿಕಾರ್, ವಿರೂಪಾಕ್ಷಿ ಕುಂಟೋಜಿ, ಆಂಜನೇಯ, ಬಸವರಾಜ, ಮರಿಸ್ವಾಮಿ, ಉಮೇಶ, ಪರಶುರಾಮ್ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net