

ಕಾರಟಗಿ: ನಿರಂತರ ಬೆಲೆ ಏರಿಕೆ ಖಂಡಿಸಿ ಹಾಗೂ ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಮತ್ತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಪಟ್ಟಣದ ಕನಕದಾಸ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪೆಟ್ರೋಲ್, ಡೀಸೆಲ್, ರಸಗೋಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಉಪಯೋಗಿ ವಸ್ತುಗಳ ಬೆಲೆ ನಿರಂತರ ಏರುತ್ತಲೇ ಇದೆ. ಈಗಾಗಲೇ ರೈತರು ಎಕರೆಗೆ 40 ಸಾವಿರ ರೂ. ವ್ಯಯಿಸಿದ್ದಾರೆ. ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆಯಲ್ಲಿ ಶೇ.40 ಹಾನಿಯುಂಟಾಗಿದೆ. ಮಾರುಕಟ್ಟೆಯಲ್ಲಿ 75 ಕೇಜಿ ತೂಕದ ಭತ್ತದ ಚೀಲವೊಂದಕ್ಕೆ 1150ರೂ.ಬೆಲೆಯಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಇದುವರೆಗೂ ಭತ್ತ ಖರೀದಿ ಕೇಂದ್ರ ಆರಂಭಿಸಲು ಮುಂದಾಗಿಲ್ಲ. ಮಾರುಕಟ್ಟೆಯ ಈಗಿನ ಬೆಲೆಗೆ ರೈತರು ಭತ್ತ ಮಾರಾಟ ಮಾಡಿದರೆ, ವ್ಯಯಿಸಿದ ಹಣವೂ ಹಿಂತಿರುಗುವುದಿಲ್ಲ. ಪ್ರತಿ ಬೆಳೆಗೂ ರೈತರು ನಷ್ಟ ಅನುಭವಿಸುತ್ತಲೇ ಇದ್ದರೂ ನಿಗದಿತ ಸಮಯಕ್ಕೆ ಭತ್ತ ಖರೀದಿ ಕೇಂದ್ರ ತೆರೆಯದೆ ಆಳುವ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಭತ್ತ ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಪಟ್ಟಣದ ವಿಶೇಷ ಎಪಿಎಂಸಿಯಿಂದ ಕನಕದಾಸ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾಂಗ್ರೆಸ್ ಮತ್ತು ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ಹೋರಾಟಕ್ಕೆ ಜೆಡಿಎಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ರವಿ ಅಂಗಡಿಗೆ ಮನವಿಪತ್ರ ಸಲ್ಲಿಸಲಾಯಿತು.
ಪುರಸಭೆ ಸದಸ್ಯ ಕೆ.ಎಚ್.ಸಂಗನಗೌಡ, ಪ್ರಮುಖರಾದ ನಾಗರಾಜ ತಂಗಡಗಿ, ಕೆ.ಸಿದ್ದನಗೌಡ, ಶರಣಬಸವರಾಜರೆಡ್ಡಿ, ಶರಣಪ್ಪ ಪರಕಿ, ತಿಪ್ಪೇಶ ಉಪನಾಳ, ಸಿ.ಎಚ್.ರವಿನಂದ, ಉದಯ ಈಡೀಗೇರ್, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ರೈತ ಸಂಘದ ಅಧ್ಯಕ್ಷ ಶರಣಪ್ಪ ಯರಡೋಣಾ, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ವಿಶೇಷ ಎಪಿಎಂಸಿ ಮಾಜಿಅಧ್ಯಕ್ಷರಾದ ಬಿ.ಶಿವರೆಡ್ಡಿ ನಾಯಕ, ಶಶಿಧರಗೌಡ ಪಾಟೀಲ್, ತಾಪಂ ಮಾಜಿಅಧ್ಯಕ್ಷ ಪ್ರಕಾಶ ಭಾವಿ ಇತರರಿದ್ದರು.