ಹದಗೆಟ್ಟ ರಸ್ತೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಮನೆಗೆ ಬಂದ ಪೊಲೀಸರು

180122 Siddapura Nandihalli Road Interrogation
ಕಾರಟಗಿ ತಾಲೂಕಿನ ಸಿದ್ದಾಪುರ-ನಂದಿಹಳ್ಳಿ ಮುಖ್ಯರಸ್ತೆ ಹದಗೆಟ್ಟಿರುವುದು. (ಸುರೇಶ ಮಡಿವಾಳರ್)
Published on

ಕಾರಟಗಿ: ಹದಗೆಟ್ಟ ರಸ್ತೆ ಬಗ್ಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಕ್ಕೆ ಯುವಕನ ಮನೆಗೆ ಪೊಲೀಸರು ತೆರಳಿ ಠಾಣೆಗೆ ಕರೆದೊಯ್ಯಲು ಮಂಗಳವಾರ ಯತ್ನಿಸಿದ್ದಾರೆ.

ತಾಲೂಕಿನ ಉಳೇನೂರು ಗ್ರಾಮದ ಸುರೇಶ ಮಡಿವಾಳರ್ ಜ.16ರಂದು ಸಿದ್ದಾಪುರ-ನಂದಿಹಳ್ಳಿ 8 ಕಿಮೀವರೆಗಿನ ಮುಖ್ಯರಸ್ತೆ ಅರೆಬರೆ ಕಾಮಗಾರಿಯಿಂದ ಸಂಪೂರ್ಣ ಹದಗೆಟ್ಟಿರುವ ಕುರಿತು ಪ್ರಶ್ನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜ.18ರ ಬೆಳಗ್ಗೆ 11ಗಂಟೆಗೆ ಪೊಲೀಸ್ ಪೇದೆ ರಮೇಶ ಹಾಗೂ ಹೋಂಗಾರ್ಡ್ ರಾಮಣ್ಣ ಎಂಬುವವರು ಯುವಕನ ಮನೆಗೆ ತೆರಳಿ, ಬೆಂಗಳೂರು ಐಟಿ ಸೆಲ್‌ನಿಂದ ಸಾಹೇಬರಿಗೆ ಮಾಹಿತಿ ಬಂದಿದೆ. ಆದ್ದರಿಂದ ಠಾಣೆಗೆ ಕರೆತರುವಂತೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕ ಸುರೇಶ ಹಾಗೂ ಕುಟುಂಬ ಸದಸ್ಯರು, ಠಾಣೆಗೆ ಬರುವುದಿಲಲ್ಲೆಂದಿದ್ದಾರೆ. ಅಂದಾಜು 2 ಗಂಟೆ ಕಾದು ಕುಳಿತ ಪೇದೆ, ಹೋಂಗಾರ್ಡ್ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದ್ದಾರೆ.

ಸಿಎಂ ಕಚೇರಿಗೆ ದೂರು: ಸಿದ್ದಾಪುರ-ನಂದಿಹಳ್ಳಿ ರಸ್ತೆ ಹದಗೆಟ್ಟ ಪರಿಣಾಮ ಅಪಘಾತಗಳು ಹೆಚ್ಚುತ್ತಿದ್ದು, ಕ್ರಮವಹಿಸುವಂತೆ ಸಿಎಂ ಕಚೇರಿ, ಲೋಕೋಪಯೋಗಿ, ಜಿಪಂ ಸಿಇಒ ಸೇರಿದಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸುರೇಶ ಇ-ಮೇಲ್ ಮಾಡಿದ್ದಾರೆ.

ಈ ಹಿಂದೆ ಪ್ರಶ್ನಿಸಿದ್ದಕ್ಕೆ ಸಿದ್ದಾಪುರ-ನಂದಿಹಳ್ಳಿ ರಸ್ತೆ ಅರೆಬರೆ ಕೆಲಸ ಮಾಡಿದ್ದಾರೆ. ಈಗ ಹಿಂದೆಗಿಂತಲೂ ರಸ್ತೆ ಹದಗೆಟ್ಟಿದ್ದು ಜನರ ಓಡಾಟಕ್ಕೆ ತೊಂದರೆಯಾಗಿದೆ. ಈ ಕುರಿತು ವಿಡಿಯೋ ಮಾಡಿ ಪ್ರಶ್ನಿಸಿದ್ದಕ್ಕೆ ಮನೆಗೆ ಪೊಲೀಸರು ಬಂದಿದ್ದಾರೆ. ಇದರ ಹಿಂದೆ ರಾಜಕೀಯ ನಾಯಕರ ಕೈವಾಡವಿದೆ.| ಸುರೇಶ ಮಡಿವಾಳರ್, ಉಳೇನೂರು ಯುವಕ.ನಮ್ಮ ಸಾಹೇಬ್ರು(ಪಿಐ), ಯುವಕನನ್ನು ಕರೆ ತರುವಂತೆ ಕಳುಹಿಸಿದ್ದರು. ಹಾಗಾಗಿ ಸುರೇಶ್ ಮನೆಗೆ ಹೋಗಿದ್ದೆ.| ರಮೇಶ, ಪೊಲೀಸ್ ಪೇದೆ, ಕಾರಟಗಿ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net