

ತೀರ್ಥಹಳ್ಳಿ: ಆತ್ಮರಕ್ಷಣೆಗೆ ಪೂರಕವಾಗಿರುವ ಕರಾಟೆಯಲ್ಲಿ ನಮ್ಮ ತಾಲೂಕಿನ ಎಳೆಯ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಎಂ.ಜೆ. ಸ್ಕೂಲ್ ಆಫ್ ಆರ್ಟ್ಸ್ ಆಶ್ರಯದಲ್ಲಿ ಕರಾಟೆ ಅಸೋಸಿಯೇಷನ್ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿ, ಪೊಲೀಸ್ ತರಬೇತಿಯಲ್ಲೂ ಕರಾಟೆ ಮತ್ತು ಯೋಗದ ಅಭ್ಯಾಸವನ್ನು ನನ್ನ ಅಧಿಕಾರವಧಿಯಲ್ಲಿ ಕಡ್ಡಾಯಗೊಳಿಸಿರುವುದಾಗಿ ತಿಳಿಸಿದರು.
ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಚಂದ್ರಯಾನ-3ರ ಯಶಸ್ಸಿನಲ್ಲೂ ತಾಲೂಕಿನ ಇಬ್ಬರು ವಿಜ್ಞಾನಿಗಳು ನಿರ್ಣಾಯಕ ಪಾತ್ರ ವಹಿಸಿರುವುದು ಹೆಮ್ಮೆಯ ಸಂಗತಿ. ಮಹಾನಗರಗಳಲ್ಲಿ ಕರಾಟೆಯಂತಹ ಕಲೆಗಳಿಗೆ ಉತ್ತಮ ಅವಕಾಶಗಳಿರುತ್ತವೆ. ಆದರೆ ತಾಲೂಕು ಕೇಂದ್ರವಾದ ತೀರ್ಥಹಳ್ಳಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿರುವ ಮಹಾಬಲ ಜೋಯ್ಸ ಮತ್ತು ಅವರಿಗೆ ಬೆಂಗಾವಲಾಗಿ ನಿಂತಿರುವ ಪಾಲಕರಿಗೆ ಅಭಿನಂದನೆಗಳು ಎಂದರು.
ಡಿವೈಎಸ್‌ಪಿ ಗಜಾನನ ಸುತಾರ್ ಮಾತನಾಡಿ, ಆರೋಗ್ಯ ರಕ್ಷಣೆ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕರಾಟೆ ಆಯುಧಗಳ ನೆರವಿಲ್ಲದೇ ಆತ್ಮರಕ್ಷಣೆಗೆ ಪೂರಕವಾದ ಕಲೆಯಾಗಿದೆ. ಅದರಲ್ಲೂ ಮುಖ್ಯವಾಗಿ ಈಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ರಕ್ಷಣೆ ಪಡೆಯಲು ಈ ಕಲೆ ಅತ್ಯಂತ ಮಹತ್ವವನ್ನು ಪಡೆದಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದ ಮಕ್ಕಳು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನೂ ಗಳಿಸಿರುವುದು ಎಂ.ಜೆ. ಸ್ಕೂಲ್ ಆಫ್ ಆರ್ಟ್ಸ್‌ನ ಸಾಧನೆಗೆ ಉದಾಹರಣೆ ಎಂದರು. ಕರಾಟೆ ಶಾಲೆ ಪ್ರಾರಂಭಕ್ಕೆ ನೆರವಾದ ರಾಜೀವಲೋಚನ, ಗಿರೀಶ್ ದಂಪತಿ ಗೌರವಿಸಲಾಯಿತು. ಎಂ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನ ಅಧ್ಯಕ್ಷ ವೈ.ಎಸ್.ಮಹಾಬಲ ಜೋಯ್ಸ, ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿ, ರೆನ್ಸಿ ದತ್ತಾತ್ರೇಯ ರೆಡ್ಡಿ, ಶಿಹಾನ್ ಚಂದ್ರಕಾಂತ ಭಟ್, ರೆನ್ಸಿ ಸುರೇಂದ್ರ ಶಾಸ್ತ್ರಿ, ವಿವೇಕಾನಂದ ರೈ, ವಾಮನ್ ಪಾಲನ್, ಅಶೋಕ್ ಕುಲಾಲ್, ಜೆ.ಕೆ.ರಾಘವೇಂದ್ರ, ಡಿ.ಬಿ.ಮಿಥುನ್, ಅಲೋಕ್ ಸಾಗರ್, ಸತೀಶ್ ನಾಯಕ್, ನಾಗರಾಜ ಗೌಡ ಇದ್ದರು.