ಮಾನವೀಯತೆ ಕಳೆದುಕೊಂಡ ಸಮಾಜದಲ್ಲಿ ರಕ್ಷಣೆಗೆ ಕರಾಟೆ ಅವಶ್ಯಕ : ನಟ ಚೇತನ್ ಅಹಿಂಸಾ

Chethan
Published on

ಮೈಸೂರು: ಮಾನವೀಯತೆ ಕಳೆದುಕೊಂಡು ಮೃಗೀಯವಾಗಿ ವರ್ತಿಸುವ ಜನರ ನಡುವೆ ಪ್ರತಿಯೊಬ್ಬರೂ ಆದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಆತ್ಮರಕ್ಷಣೆಗೆ ಕರಾಟೆ ಕಲಿಯುವುದು ಅವಶ್ಯಕ ಎಂದು ನಟ ಚೇತನ್ ಅಹಿಂಸಾ ಹೇಳಿದರು.

ನಗರದ ಮೈಸೂರು ವಿಶ್ವ ವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್ ಯೋಗ ಮಂದಿರದಲ್ಲಿ ಮಂಗಳವಾರ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ 18ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಇತ್ತೀಚಿಗೆ ಕರಾಟೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ಕರಾಟೆ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕರಾಟೆ ಪ್ರತಿಯೊಬ್ಬರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕರಾಟೆ ಕಲಿಯಲು ಆಸಕ್ತಿ ತೋರಬೇಕು ಎಂದು ಹೇಳಿದರು.

ಹಣ, ಆಸ್ತಿ, ಐಶ್ವರ್ಯದ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ಇದ್ದಲ್ಲಿ ಮಾನವೀಯ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಸಾಹಿತಿ ಬನ್ನೂರು ಕೆ.ರಾಜು, ಮಾಜಿ ಮೇಯರ್ ಪುರುಷೋತ್ತಮ್, ಹಿರಿಯ ಕರಾಟೆ ತರಬೇತುದಾರ ನಾಗರಾಜು, ಟ್ರಾಫಿಕ್ ವಾರ್ಡನ್ ಮಹೇಶ್ವರ್, ಚಿತ್ರಕಲಾವಿದ ಜೆ.ಮೂರ್ತಿ ಮುಡಿಗುಂಡ, ಗ್ರಾಫಿಕ್ ಡಿಸೈನರ್ ತಿರುಮಲ್ಲೇಶ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.93ರಷ್ಟು ಅಂಕಗಳಿಸಿದ ವಿದ್ಯಾರ್ಥಿನಿ ನಿಖಿತಾ ಅವರನ್ನು ಸನ್ಮಾನಿಸಲಾಯಿತು.

ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಿ.ನರಸೀಪುರದ ನಳಂದ ಬುದ್ಧವಿಹಾರದ ಬಂತೆ ಬೋಧಿರತ್ನ, ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್, ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಾಲವಿಕ ಗುಬ್ಬಿವಾಣಿ, ಕನಕಪುರದ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಮಲ್ಲಿಕಾರ್ಜುನ, ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಎನ್.ಜಿ.ಶಿವದಾಸ್, ಕಾರ್ಯದರ್ಶಿ ದೀಪಕ್ ಕುಮಾರ್, ಎಕೆಎಸ್‌ಕೆಎ ರಾಜ್ಯ ಉಪಾಧ್ಯಕ್ಷ ಎನ್. ಶಂಕರ, ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸೋಸಲೆ ಸಿದ್ದರಾಜು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net