

ತಿ.ನರಸೀಪುರ: ವೈಯಕ್ತಿಕ ರಕ್ಷಣೆಗೆ ಪ್ರಸ್ತುತ ಸಮಾಜದಲ್ಲಿ ಕರಾಟೆಯಂತಹ ಕ್ರೀಡಾ ಕಲೆ ಅಗತ್ಯವಾಗಿದ್ದು, ಚಿಕ್ಕ ವಯಸ್ಸಿನ ಮಕ್ಕಳು ಕರಾಟೆ ಕಲಿತರೆ ಉತ್ತಮ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ ಅಭಿಪ್ರಾಯಪಟ್ಟರು.
ತಾಲೂಕಿನ ಸೋಸಲೆ ಗ್ರಾಮ ಬಳಿಯ ಜ್ಞಾನೋದಯ ಶಾಲೆಯಲ್ಲಿ ಶನಿವಾರ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಶೋಷಣೆ ಮತ್ತು ದೌರ್ಜನ್ಯ ಮುಕ್ತವಾದ ಸುಸ್ಥಿರ ಸಮಾಜ ಕಟ್ಟಲು ಬೆಳೆಯುವ ವಯಸ್ಸಿನಲ್ಲಿಯೇ ಮಕ್ಕಳು ಕರಾಟೆ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ನಂಜುಂಡಯ್ಯ ಮಾತನಾಡಿ, ಕರಾಟೆಯನ್ನು ಹೆಣ್ಣು ಮಕ್ಕಳು ಕಡ್ಡಾಯವಾಗಿ ಕಲಿತರೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಉಪಯುಕ್ತವಾಗಿದೆ ಎಂದು ಸಲಹೆ ನೀಡಿದರು.
ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಸಂಸ್ಥಾಪಕ ಸೋಸಲೆ ಸಿದ್ದರಾಜು, ಕರಾಟೆ ತರಬೇತಿದಾರರಾದ ಸತೀಶ್, ಶಿವಕುಮಾರ್ ನಾಗಸಾಕ್ಯ, ದೈಹಿಕ ಶಿಕ್ಷಣ ಶಿಕ್ಷಕ ಮಹದೇವಸ್ವಾಮಿ ಹಾಗೂ ಶಾಲೆಯ ಶಿಕ್ಷಕರು ಇದ್ದರು.