

ಕಾರಟಗಿ: ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಗುರುವಾರ ಭೇಟಿ ನೀಡಿ, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಮೊದಲು ಗ್ರಾಪಂ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಯಿಂದ ನಾನಾ ಕಾಮಗಾರಿಗಳ ಮಾಹಿತಿ ಪಡೆದರು. ನಂತರ ಕೂಸಿನ ಮನೆಗೆ ತೆರಳಿ ಅಲ್ಲಿನ ವಸ್ತುಸ್ಥಿತಿ ವೀಕ್ಷಿಸಿದರು. ಮಕ್ಕಳಿಗೆ ನೀಡಲಾಗುವ ಆಹಾರ ಕುರಿತು ಮಾಹಿತಿ ಪಡೆದರು.
ಬಳಿಕ ಪಕ್ಕದಲ್ಲಿನ ಕಸ್ತೂರಬಾ ಗಾಂಧಿ ವಿದ್ಯಾಲಯಕ್ಕೆ ತೆರಳಿ ಮಕ್ಕಳ ಕಲಿಕೆ, ಫಲಿತಾಂಶ ಕುರಿತು ಮುಖ್ಯಶಿಕ್ಷಕ ಚಂದ್ರಶೇಖರ ಗಣವಾರಿಯಿಂದ ಮಾಹಿತಿ ಪಡೆದರು. ಇಲ್ಲಿಂದ ಸರ್ಕಾರಿ ಪ್ರೌಢಶಾಲೆಗೆ ಹೋದ ಸಿಇಒ, ಫಲಿತಾಂಶ ಸುಧಾರಣೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ಸೂಚನೆಗಳನ್ನು ನೀಡಿದರು. ಬಳಿಕ ಅಂಗನವಾಡಿಗೆ ಭೇಟಿ ನೀಡಿ, ಮಕ್ಕಳ ಸಂಖ್ಯೆ, ಆಹಾರ ವಿತರಣೆ, ಮೊಟ್ಟೆಯ ಗಾತ್ರ ಇತರ ವಿಷಯಗಳ ಬಗ್ಗೆ ತಿಳಿದುಕೊಂಡರು. ಇಲ್ಲಿಂದ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಜೈ ಕಿಸಾನ್ ತಾಂಡಾ ಹಾಗೂ ಸಿದ್ದಾಪುರದಲ್ಲಿ ನಿರ್ಮಾಣ ಮಾಡಲಾದ ಜೆಜೆಎಂ ಕಾಮಗಾರಿಗಳನ್ನು ವೀಕ್ಷಣೆ ಮಾಡಿ, ಗ್ರಾಪಂ ಸಿಬ್ಬಂದಿಗೆ ಕೆಲ ಸೂಚನೆಗಳನ್ನು ನೀಡಿದರು. ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ, ಪಿಡಿಒ ಜ್ಯೋತಿ ರಡ್ಡಿ, ಸಿಬ್ಬಂದಿ ವೀರೇಶ್ ಗಿಂಡಿಮಠ, ಪ್ರಕಾಶ್ ಸಜ್ಜನ್ ಇತರರಿದ್ದರು.
ಮಕ್ಕಳಿಗೆ ಓದಲು-ಬರೆಯಲು ಕಲಿಸಿ: ಸಿದ್ದಾಪುರದ ಗ್ರಾಪಂ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಜಿಪಂ ಸಿಇಒ ವರ್ಣಿತ್ ನೇಗಿ, ಶಿಕ್ಷಕರಿಗೆ ಕೆಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಕ್ಕಳಿಗೆ ಇಂದಿಗೂ ಓದಲು, ಬರೆಯಲು ಬರೊಲ್ಲ. ಹೀಗಾದರೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹೇಗೆ ಎಂದು ಶಿಕ್ಷಕರನ್ನು ಪ್ರಶ್ನಿಸಿದರು. ಮೊದಲೇ ಪ್ರಯತ್ನ ಮಾಡಿದ್ದರೆ, ಎಸ್ಸೆಸ್ಸೆಲ್ಸಿ ಮಕ್ಕಳು ಮೊದಲ ಪ್ರಯತ್ನದಲ್ಲೇ ಪಾಸಾಗುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಈಗಿನಿಂದಲೇ ಶಾಲಾ ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ ಎಂದು ನಿರ್ದೇಶಿಸಿದರು.