

ಕಾರಟಗಿ: ಬಣಜಿಗ ಸಮುದಾಯದವರಿಗೆ ನೋವಾಗುವ ರೀತಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕ್ಷಮೆಯಾಚಿಸಬೇಕು. ಇವರ ವಿರುದ್ಧ ಜಿಲ್ಲಾ ಘಟಕದಿಂದ ಅ.31ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ ಎಂದು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವೀರೇಶಪ್ಪ ಚಿನಿವಾಲ ಹಾಗೂ ಕಾರ್ಯದರ್ಶಿ ಶರಣಪ್ಪ ಗದ್ದಿ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಂಚಮಸಾಲಿ ಮತ್ತು ಬಣಜಿಗರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಸ್ವಾಗತಾರ್ಹ. ಹೋರಾಟದ ವೇಳೆ ಇನ್ನೊಂದು ಸಮುದಾಯದವರಿಗೆ ನೋವುಂಟಾಗುವ ರೀತಿಯಲ್ಲಿ ಮತ್ತು ಅವಹೇಳನಕಾರಿಯಾಗಿ ಮಾತನಾಡಬಾರದು. ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಅವರ ವೈಯಕ್ತಿಕ ಮಾತುಗಳಿಂದಾಗಿ ನೋವುಂಟಾಗಿದೆ. ಕೂಡಲೇ ಇಬ್ಬರೂ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು. ಕೊಪ್ಪಳದಲ್ಲಿ ನಡೆಯಲಿರುವ ರ‌್ಯಾಲಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕು ಘಟಕಗಳಿಂದ ಸಮುದಾಯದವರು ಅಪಾರ ಸಂಖ್ಯೆಯಲ್ಲಿ ಸೇರಲಿದ್ದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ವೀರೇಶಪ್ಪ, ಶರಣಪ್ಪ ತಿಳಿಸಿದರು. ಸಂಘದ ಗೌರವಾಧ್ಯಕ್ಷ ಅಮರಗುಂಡಪ್ಪ ಕೋರಿ, ಉಪಾಧ್ಯಕ್ಷರಾದ ಜಗದೀಶಪ್ಪ ಅವರಾದಿ, ಮಲ್ಲಿಕಾರ್ಜುನ ಕೊಟಗಿ, ಪ್ರಧಾನ ಕಾರ್ಯದರ್ಶಿ ವೀರೇಶ ಸೌದ್ರಿ, ಪ್ರಮುಖರಾದ ಸಿದ್ರಾಮಪ್ಪ ಪಲ್ಲೇದ್ ಇತರರಿದ್ದರು.