

ಕಾರಟಗಿ: ತಾಲೂಕಿನ ಉಳೇನೂರಿನಿಂದ ಬೂದಗುಂಪಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಅರೆಬರೆಯಾಗಿದ್ದು, ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ 4ಕೋಟಿ ರೂ.ವೆಚ್ಚದಲ್ಲಿ ಈ ರಸ್ತೆ ಅನುಮೋದನೆ ಗೊಂಡಿತ್ತು. 2022ರಲ್ಲೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಒಟ್ಟು 8ಕಿ.ಮೀ. ರಸ್ತೆ ನಿರ್ಮಾಣವಾಗಬೇಕಿದ್ದು, ಈವರಗೆ 3.5 ಕಿ.ಮೀ ಮಾತ್ರ ನಿರ್ಮಾಣ ಮಾಡಲಾಗಿದೆ. ಇನ್ನುಳಿದ ಕಡೆ ಮೆಟ್ಲಿಂಗ್ ಮಾಡಿ ಜಲ್ಲಿ ಕಲ್ಲು ಹಾಕಲಾಗಿದೆ. ಇದರಿಂದ ಈ ಮಾರ್ಗದಿಂದ ಸಂಚರಿಸುವ ವಾಹನ ಸವಾರರು ಹರಸಾಹಸ ಪಡಬೇಕಾಗಿದೆ. ಬೇಸಿಗೆ ಆರಂಭವಾಗಿರುವ ಹಿನ್ನಲೆ ಚೆಂಚಿಗಳು ಕಾಯುವುದರಿಂದ ಹಾಗೂ ಬೈಕ್ ಟೈರ್‌ಗಳಿಗೆ ಚುಚ್ಚುವುದರಿಂದ ಪಂಚರ್ ಆಗುತ್ತಿವೆ. ಎತ್ತು, ಬಂಡಿಗಳು ಸರಾಗವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಕ್ರಮವಹಿಸಬೇಕು ಎನ್ನುವುದು ಜನರ ಆಗ್ರಹ.
ಪಿಎಂಜಿಎಸ್‌ವೈ ಯೋಜನೆಯಡಿ ಉಳೇನೂರಿನಿಂದ ಬೂದಗುಂಪಾವರೆಗೆ 8 ಕಿ.ಮೀ ರಸ್ತೆ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಮೂರೂವರೆ ಕಿ.ಮೀ ಡಾಂಬರ್ ಮಾಡಲಾಗಿದೆ. ಇನ್ನುಳಿದಂತೆ ಮೆಟ್ಲಿಂಗ್ ರಸ್ತೆ ನಿರ್ಮಾಣ ಮಾಡಲಾಗಿದೆ. ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಕಾರ್ಯ ನಿರ್ವಹಿಸಗುವುದು. ನಾಳೆಯಿಂದಲೇ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಲಿದೆ. | ಸಿದ್ದಪ್ಪ ಜೆ.ಇ, ಪಿಎಂಜಿಎಸ್‌ವೈ, ಕಾರಟಗಿ ಪಿಎಂಜಿಎಸ್‌ವೈ ಯೋಜನೆಯಡಿ ಉಳೇನೂರಿನಿಂದ ಬೂದಗುಂಪಾಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ನಡೆದಿದೆ. 2022ಕ್ಕೆ ಮುಗಿಯಬೇಕಿದ್ದ ಕಾಮಗಾರಿ ಈವರೆಗೆ ಮುಗಿದಿಲ್ಲ. ಜಲ್ಲಿಕಲ್ಲು ಹಾಕಿರುವುದರಿಂದ ವಾಹನ ಸಂಚಾರ ಹಾಗೂ ಜಾನುವಾರುಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಬೇಕು. | ಬಸವರಾಜಪ್ಪ ಚೆಳ್ಳೂರು ಬೂದಗುಂಪಾ ಗ್ರಾಮಸ್ಥ