ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ

071221 Karatagi ABVP Protest
ಕಾರಟಗಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಸಾರಿಗೆ ಸೌಕರ್ಯ ಸಮರ್ಪಕ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಸಾರಿಗೆ ಶಾಖೆ ವ್ಯವಸ್ಥಾಪಕ ಚಂದ್ರಶೇಖರಗೌಡಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು.
Published on

ಕಾರಟಗಿ: ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪಟ್ಟಣದ ಕನಕದಾಸ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನವಲಿಯಿಂದ ಕಾರಟಗಿಗೆೆ ಬೆಳಗ್ಗೆ 9.30ಕ್ಕೆ, ಕಾರಟಗಿಯಿಂದ ನವಲಿಗೆ ಮಧ್ಯಾಹ್ನ 2.30ಕ್ಕೆ ತೆರಳಲು ಹಾಗೂ ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಗ್ರಾಮಗಳಿಗೆ ಮಧ್ಯಾಹ್ನ 3ಗಂಟೆಗೆ ತೆರಳುವ ಬಸ್‌ನ್ನು 2.30ಕ್ಕೆ ತೆರಳಲು ವೇಳಾಪಟ್ಟಿ ಬದಲಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಸೂಕ್ತ ಸಾರಿಗೆ ಸೌಕರ್ಯ ಇಲ್ಲದೇ ತೊಂದರೆ ಪಡುತ್ತಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಪಟ್ಟಣಕ್ಕೆ ಬಂದರೆ, ಇನ್ನೂ ಕೆಲವರು ಕಲಿಕೆ ಮೊಟುಕುಗೊಳಿಸಿ ಉನ್ನತ ವ್ಯಾಸಾಂಗದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಸೂಕ್ತ ಸಾರಿಗೆ ಸೌಕರ್ಯ ಕಲ್ಪಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಬಳಿಕ ಸಾರಿಗೆ ವ್ಯವಸ್ಥಾಪಕ ಚಂದ್ರಶೇಖರಗೌಡ ಅವರಿಗೆ ಮನವಿಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದ ಕನಕದಾಸ ವೃತ್ತದಿಂದ ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net