ದಾಖಲೆಗಳ ಗೋಲ್‌ಮಾಲ್, ಕಂದಾಯ ಸಿಬ್ಬಂದಿಯಿಂದಲೇ ಕೃತ್ಯ

GOLMAL
ಕಾರಟಗಿ ತಹಸಿಲ್ ಕಚೇರಿಯಲ್ಲಿನ ದಾಖಲೆಗಳ ಅಕ್ರಮದ ಕುರಿತು ಜಿಲ್ಲಾಧಿಕಾರಿಗೆ ತಹಸೀಲ್ದಾರ್ ಕುಮಾರಸ್ವಾಮಿ ಬರೆದ ದೂರಿನ ಪತ್ರದ ಪ್ರತಿ.
Published on

ಕಾರಟಗಿ: ಇಲ್ಲಿನ ತಹಸಿಲ್ ಕಚೇರಿಯ ಭೂಮಿ ಕೇಂದ್ರದಲ್ಲಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ರೈತರ ದಾಖಲೆಗಳ ಗೋಲ್‌ಮಾಲ್ ನಡೆಸಿದ್ದಾರೆಂದು ಆರೋಪಿಸಿ ಜಿಲ್ಲಾಧಿಕಾರಿಗೆ ತಹಸೀಲ್ದಾರ್ ಕುಮಾರಸ್ವಾಮಿ ಪತ್ರ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗ್ರೇಡ್-1 ತಹಸೀಲ್ದಾರ್ ಬಸವರಾಜ ಅವಧಿ ವೇಳೆ ದಾಖಲೆಗಳ ವ್ಯಾಪಕ ಅಕ್ರಮ ನಡೆದಿರುವುದು ಪ್ರಾಥಮಿಕ ಹಂತದಲ್ಲಿ ಕಂಡುಬಂದಿದೆ. ಹಲವು ಪೋತಿ ಖಾತೆ, ಮುಟೇಷನ್ ಬದಲಾವಣೆ, ಪಹಣಿ ತಿದ್ದುಪಡಿಯಲ್ಲಿ ಕೆಲ ಅಧಿಕಾರಿಗಳು ನಿಯಮ ಉಲ್ಲಂಘಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ಪಟ್ಟಣ ಖ್ಯಾತಿಯ ಕಾರಟಗಿಯಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಬಡವರು, ಅಸಹಾಯಕರು ಹಾಗೂ ಅನಕ್ಷರಸ್ಥ ರೈತರನ್ನೇ ಬಂಡವಾಳ ಮಾಡಿಕೊಂಡ ಪಟ್ಟಭದ್ರ ಗುಂಪೊಂದು ಇಂತಹ ಅಕ್ರಮಗಳಿಗೆ ಇಳಿದಿದೆ. ಸುಖಾಸುಮ್ಮನೆ ರೈತರು, ಕುಟುಂಬಸ್ಥರ ನಡುವೆ ವಿವಾದ, ಕಲಹ ಸೃಷ್ಟಿಮಾಡುತ್ತಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ.

ಏನಿದು ಪ್ರಕರಣ?

ಹಲವು ಪೋತಿ ಖಾತೆ ಬದಲಾವಣೆ ಮಾಡಿದ ಪ್ರಕರಣಗಳಲ್ಲಿ ಕುಟುಂಬದ ಏಕವ್ಯಕ್ತಿಗೆ ಖಾತೆ ಬದಲಾವಣೆ ಮಾಡಲಾಗಿದೆ. ಸದರಿ ವ್ಯಕ್ತಿಗೆ ಮುಟೇಷನ್ ಮಾಡುವ ವೇಳೆ ವಂಶವೃಕ್ಷದ ಪ್ರಕಾರ ಕುಟುಂಬದಲ್ಲಿ ಜೀವಂತ ಇರುವ ಎಲ್ಲ ಸದಸ್ಯರ ಸಹಿ ಪಡೆಯದೇ, ಕೇವಲ ಅರ್ಜಿದಾರರ ಪರವಾಗಿರುವವರ ಸಹಿ ಪಡೆದು ತಹಸೀಲ್ದಾರ್ ಸಮಕ್ಷಮವೆಂದು ಅಫಿಡವಿಟ್‌ನಿಂದ ಖಾತೆ ಬದಲಾವಣೆ ಮಾಡಲಾಗಿದೆ.

ಮುದ್ದತ್ತಿನ ವೇಳೆ ನಮೂನೆ 21ರಲ್ಲಿ ಕುಟುಂಬ ಸದಸ್ಯರು ಹಾಗೂ ಅಫಿಡವಿಟ್‌ನಲ್ಲಿ ತಹಸೀಲ್ದಾರ್ ಒಪ್ಪಿಗೆ ಮತ್ತು ಸಹಿ ಪಡೆದಿಲ್ಲ. ತಹಸೀಲ್ದಾರ್ ಗಮನಕ್ಕೂ ತರದೆ, ಭೂಮಿ ಕೇಂದ್ರದಲ್ಲಿ ಅರ್ಜಿ ಹಾಕಿ ಪೋತಿ ಮುಟೇಷನ್ ಮಂಜೂರು ಮಾಡಲಾಗಿದೆ. ಕೆಲ ಪ್ರಕರಣಗಳಲ್ಲಿ ತಹಸೀಲ್ದಾರ್ ಸಮಕ್ಷಮದಲ್ಲಿ ಒಪ್ಪಿಗೆ ಪಡೆಯದಿದ್ದರಿಂದ ನಕಲಿ ಹೆಬ್ಬಟ್ಟು ಸಹಿ ಮಾಡಲಾಗಿದೆ. ಕುಟುಂಬ ಸದಸ್ಯರ ಆಧಾರ್‌ಕಾರ್ಡ್, ಮರಣ ಪ್ರಮಾಣ ಪತ್ರ ಪಡೆಯದೆ ಖಾತೆ ಬದಲಾವಣೆ ಮಾಡಿರುವುದು ಕಂಡುಬಂದಿದೆ.

ಇನ್ನು ಮುದ್ದತ್ತಿನ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಾರದಿದ್ದರು (ಪ್ರಕರಣದ ಯಾರಿಂದಲೂ ಅಥವಾ ನ್ಯಾಯ್ಯಾಲಯದಿಂದ ಆಕ್ಷೇಪಣೆ, ಎಸ್‌ಸಿ/ಎಸ್‌ಟಿ ಹಾಗೂ ಭೂ ಮಂಜೂರಾತಿ ಅಥವಾ ಇತರ ನಿಯಮಗಳು ಉಲ್ಲಂಘನೆಯಾಗಿದ್ದರೆ ಕಡತಗಳನ್ನು ತಿರಸ್ಕರಿಸಬಹುದು) ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಏಕಪಕ್ಷೀಯವಾಗಿ ತಾವೇ ಅರ್ಜಿಗಳನ್ನು ತಿರಸ್ಕರಿಸಿ ವಿವಾದಾಸ್ಪದ ಪ್ರಕರಣವೆಂದು ತಹಸೀಲ್ದಾರ್ ಕಚೇರಿಗೆ ಕಡತಗಳನ್ನು ಹಿಂತಿರುಗಿಸಿದ್ದಾರೆ. ಇದರಿಂದಾಗಿ ಕಂದಾಯ ಇಲಾಖೆಯಿಂದಲೇ ವಿವಾದ ಸೃಷ್ಟಿಸಿ ಮೇಲ್ಮನವಿ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚಾಗುತ್ತಿವೆ ಎಂದು ಸುದೀರ್ಘ ನಾಲ್ಕು ಪುಟಗಳ ದೂರಿನಲ್ಲಿ ತಹಸೀಲ್ದಾರ್ ಸವಿವರವಾಗಿ ಉಲ್ಲೇಖಿಸಿದ್ದಾರೆ.

ಸಹಿ ಇಲ್ಲದೆ ತಿದ್ದುಪಡಿ

ಕೆಲವು ಪಹಣಿಗಳನ್ನು ತಹಸೀಲ್ದಾರ್ ಗಮನಕ್ಕೆ ತರದೆ ಮತ್ತು ಸಹಿ ಪಡೆಯದೆ ತಿದ್ದುಪಡಿ ಮಾಡಲಾಗಿದೆ. ಅಲ್ಲದೆ ಕೆಲವು ಮೋಜಿಣಿ ಕಡತಗಳಲ್ಲಿ ಏಕಪಕ್ಷೀಯವಾಗಿ ತಹಸೀಲ್ದಾರ್ ಸಹಿ ಪಡೆಯದೆ ತಿದ್ದುಪಡಿ ಮಾಡಿರುವುದು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿಗೆ ತಹಸೀಲ್ದಾರ್ ಪತ್ರ ಬರೆದಿದ್ದಾರೆ. ರೈತರು ತಮ್ಮ ಜಮೀನುಗಳ ದಾಖಲೆಗಳ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕಿದೆ.

ಇವರೇ ಕಾರಣಕರ್ತರು

ಕಳೆದ 20 ವರ್ಷಗಳಿಂದ ಅಖಂಡ ಗಂಗಾವತಿ ತಾಲೂಕಿನಲ್ಲೇ ಗ್ರಾಮಲೆಕ್ಕಾಧಿಕಾರಿ, ಭೂಮಿ ಆಪರೇಟರ್, ಕಂದಾಯ ನಿರೀಕ್ಷಕ, ಆರ್‌ಆರ್ ಶಿರಸ್ತೇದಾರ್, ಭೂಮಿ ಸಂಕಲನ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಸಿದ್ದಾಪುರ ಉಪ ತಹಸೀಲ್ದಾರ್ ಆಗಿ ಕೆಲಸ ಮಾಡುತ್ತಿರುವ ಪ್ರಕಾಶ ನಾಯಕ ಅವರೇ ದಾಖಲೆಗಳ ಅಕ್ರಮಕ್ಕೆ ಮೂಲ ಕಾರಣಕರ್ತರು. ಇವರ ಜತೆಗೆ ಕಾರಟಗಿ ಗ್ರಾಮಲೆಕ್ಕಾಧಿಕಾರಿ ಸೋಮನಾಥ, ಸಿದ್ದಾಪುರ ಕಂದಾಯ ನಿರೀಕ್ಷಕ ಶರಣಪ್ಪ ಕೈ ಜೋಡಿಸಿದ್ದಾರೆ. ದಾಖಲೆಗಳ ಸಮಗ್ರ ತನಿಖೆ ನಡೆಸಿದರೆ ಎಲ್ಲ ಅಕ್ರಮಗಳು ಬಯಲಿಗೆ ಬರಲಿವೆ ಎಂದು ತಹಸೀಲ್ದಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೂರು ಸಲ್ಲಿಸಿದ ತಹಸೀಲ್ದಾರ್ ಮೇಲೆ ಮತ್ತೊಂದು ಗುಂಪು ದೂರು ಕೊಟ್ಟಿದೆ. ಅವರ ನಡುವೆ ಯಾವ ಸಮಸ್ಯೆಗಳು ಇವೆಯೆಂದು ಗೊತ್ತಿಲ್ಲ. ಒಟ್ಟಾರೆ ರೈತರು, ಬಡವರು ಬಲಿಪಶು ಆಗದಂತೆ ತನಿಖೆ ನಡೆಸುತ್ತೇನೆ. ಯಾರೇ ತಪ್ಪಿತಸ್ಥರಿದ್ದರೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.ನಲೀನ್ ಅತುಲ್, ಜಿಲ್ಲಾಧಿಕಾರಿ ಕೊಪ್ಪಳ ಈ ಪ್ರಕರಣ ಕುರಿತು ತಹಸೀಲ್ದಾರ್ ಅವರನ್ನು ಕರೆದು ಮಾತನಾಡುತ್ತೇನೆ. ಅವರು ಯಾರ ಬಗ್ಗೆ ಆರೋಪ ಮಾಡುತ್ತಿದ್ದಾರೆ, ಅವರನ್ನೂ ಕರೆದು ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ದಾಖಲೆಗಳ ಅಕ್ರಮಕ್ಕೆ ಅವಕಾಶ ನೀಡದೆ ಅವರವರ ಆಸ್ತಿ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಅದನ್ನು ಮಾಡುತ್ತೇನೆ.ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net