

ಕಾರಟಗಿ: ಟೇಲೆಂಡ್ ಭಾಗಕ್ಕೆ ನೀರು ತಲುಪದ ಹಿನ್ನೆಲೆಯಲ್ಲಿ ತಾಲೂಕಿನ 31ನೇ ವಿತರಣಾ ಕಾಲುವೆ ಬಳಿ ರೈತರು ಹಾಗೂ ಅಧಿಕಾರಿಗಳ ನಡುವೆ ನಡೆದಿದ್ದ ಬಿಕ್ಕಟ್ಟು ಗುರುವಾರವೂ ಮುಂದುವರಿದಿದ್ದು, ನಾ ಕೊಡೆ, ನೀ ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.
ಅಧಿಕಾರಿಗಳು ಹಾಗೂ ರೈತರು ಬುಧವಾರ ಒಮ್ಮತದ ನಿರ್ಧಾರಕ್ಕೆ ಬಂದು 210 ತ್ರಡ್ ಗೇಜ್ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಗುರುವಾರ ಬೆಳಗ್ಗೆ ವರೆಗೂ ಪರಿಸ್ಥಿತಿ ತಿಳಿಯಿತ್ತು. ಆದರೆ, ಕರ್ನಾಟಕ ನೀರಾವರಿ ನಿಗಮದ ಮೇಲಧಿಕಾರಿಗಳು 170 ತ್ರಡ್‌ಗೆ ಇಳಿಸಿದ್ದರು. ಇದರಿಂದ ಅಸಮಾಧಾನ ಗೊಂಡ ರೈತರು, 31ನೇ ವಿತರಣೆ ಕಾಲುವೆಗೆ ತೆರಳಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಪೊಲೀಸರು, ತಹಸೀಲ್ದಾರ್ ರೈತರನ್ನು ಸಮಾಧಾನಗೊಳಿಸಲು ಹರಸಾಹಸ ಪಟ್ಟರು.
ಟೇಲೆಂಡ್ ಭಾಗದಲ್ಲಿ ಸಮರ್ಪಕ ನೀರು ದೊರೆಯದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾಳಾದರೆ ಲಕ್ಷಾಂತರ ರೂ. ನಷ್ಟವಾಗಲಿದೆ. ಹೀಗಾಗಿ ಕನಿಷ್ಠ 210 ತ್ರಡ್ ಗೇಜ್ ನೀರು ಬಿಡಲೇ ಬೇಕು. ಇಲ್ಲದಿದ್ದರೆ, ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಅಧಿಕಾರಿಗಳು ಹಾಗೂ ರೈತರು ಮಾತನಾಡಿಕೊಂಡು ಏ.10ರವರೆಗೆ 205 ತ್ರಡ್ ಗೇಜ್ ನೀರು ಹರಿಸಲು ಸಮ್ಮತಿಸಿದರು.
ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಪಿಐ ಸುಧೀರ್ ಬೆಂಕಿ, ಪ್ರಮುಖರಾದ ಸಂಗಮೇಶ್ ಗೌಡ ಬೂದಗುಂಪಾ, ಶರಣೇಗೌಡ ಪಾಟೀಲ್ ಬೂದಗುಂಪಾ, ಅಂಬಣ್ಣ ಹರಿಜನ, ಶೇಖರಪ್ಪ ಹರಿಜನ, ಷಣ್ಮುಖಪ್ಪ ಉಳೇನೂರು, ಶರಣಪ್ಪ, ಮನೋಹರಗೌಡ, ನಾಗೇಶ್ವರ ರಾವ್, ಮಾನ್ವಿ ಸೀನಪ್ಪ ಇತರರಿದ್ದರು.