ಒಳ ಮೀಸಲು ಜಾರೀಲಿ ಕಾಲಹರಣ ಸಲ್ಲ

PROTEST
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಕಾರಟಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪದಾಧಿಕಾರಿಗಳಾದ ಮುತ್ತಣ್ಣ ಹುಡಾ ಸಿದ್ದಾಪುರ, ಎಂ. ಲಕ್ಷ್ಮಣ, ವೀರೇಶ ವಕೀಲ, ಚಿಂದಾನಂದಪ್ಪ ಚೌಡಕಿ, ಶಿವಪ್ಪ ಮ್ಯಾಗಡಮನೆ, ಮರಿಸ್ವಾಮಿ ಪೂಜಾರಿ, ದುರಗಪ್ಪ ನಂದಾಪುರ, ಯಲ್ಲಪ್ಪ ಕಟ್ಟಿಮನಿ ಇತರರಿದ್ದರು.
Published on

ಸಿದ್ದಾಪುರ: ಬೇರೆ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿ ಪ್ರಗತಿಯಲ್ಲಿದೆ. ಇದು ಕರ್ನಾಟಕದಲ್ಲೂ ಅನುಷ್ಠಾನಗೊಳ್ಳುವವರೆಗೆ ಹುದ್ದೆಗಳ ಭರ್ತಿಗೆ ಮುಂದಾಗಬಾರದು ಎಂದು ತಾಲೂಕು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಕಾರಟಗಿಯ ಕನಕದಾಸ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ಮೀಸಲಾತಿ ಪ್ರಮಾಣ ದೊರಕುತ್ತಿಲ್ಲ. ನಮ್ಮ ಸಮುದಾಯಕ್ಕೆ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಮೂವತ್ತು ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಫಲವಾಗಿ ಸುಪ್ರೀಂಕೋರ್ಟ್ ಒಳ ಮೀಸಲು ಜಾರಿ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ.

ತೆಲಂಗಾಣ ಸಿಎಂ ವಿಧಾನಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ನಿರ್ಣಯ ಕೈಗೊಂಡು, ಸಚಿವ ಸಂಪುಟದ ಉಪ ಸಮಿತಿ ರಚಿಸಿದ್ದಾರೆ. ಎರಡು ತಿಂಗಳ ಒಳಗೆ ಮೀಸಲಾತಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಬೇಕು. ಕೆಪಿಎಸ್‌ಸಿ ಕರೆದಿರುವ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿರುವ ನೋಟಿಫಿಕೇಷನ್ ತಡೆಹಿಡಿಯಬೇಕು. ಸರ್ಕಾರದ ಯೋಜನೆಗಳಲ್ಲಿ ಆರ್ಥಿಕ ಮೀಸಲಾತಿ (ಎಸ್ಸಿಎಸ್ಪಿ/ಟಿಎಸ್ಪಿ) ಕೆ.ಐ.ಎ.ಡಿ.ಬಿ. ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯೂ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಬಳಿಕ ತಹಸೀಲ್ದಾರ್ ಎಂ. ಕುಮಾರಸ್ವಾಮಿಗೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಭೀಮೇಶ ಬೂದಗುಂಪಾ, ಸಣ್ಣಗಾಳೇಶ ಇಂದಿರಾನಗರ, ಗಾಂದಿ ಲಿಂಗಪ್ಪ ಪನ್ನಾಪುರ, ಪರಶುರಾಮ್ ನಂದಿಹಳ್ಳಿ, ಮೌನೇಶ ಭಜರಂಗಿ, ಜಮದಗ್ನಿ ಚೌಡಕಿ, ಸಣ್ಣರಾಮಣ್ಣ ಹಳ್ಳಿಕೇರಿ, ಆನಂದ, ಶರಣಪ್ಪ ವಣಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net