

ಶರಣಪ್ಪ ಕೃಷ್ಣಾಪುರ
ಕಾರಟಗಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸಿಇಟಿ, ಎನ್‌ಇಇಟಿ, ಜೆಇಇಗಳಿಗೆ ರಾಜ್ಯ ಸರ್ಕಾರ ಉಚಿತ ಆನ್‌ಲೈನ್ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ಇದರ ಸದ್ಬಳಕೆ ಪಡೆಯದೆ ಹೊರಗುಳಿದಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ 25ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ, ಎನ್‌ಇಇಟಿ, ಜೆಇಇಗಳಿಗೆ ಆನ್‌ಲೈನ್ ತರಬೇತಿ ನೀಡುವ ಯೋಜನೆ ಸರ್ಕಾರ ಜಾರಿಗೊಳಿಸಿದೆ. ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಲಕ್ಷಾಂತರ ರೂ. ವ್ಯಯಿಸಿ ವೃತ್ತಿಪರ ಕೋರ್ಸ್‌ಗಳ ತರಬೇತಿ ಪಡೆಯಲು ಖಾಸಗಿ ಸಂಸ್ಥೆಗಳಲ್ಲಿ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಸರ್ಕಾರ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯಾದ್ಯಂತ 25 ಸಾವಿರ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತವಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್ ತರಬೇತಿ ನೀಡುತ್ತಿದೆ. ಆದರೆ, ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿಲ್ಲ.
ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತರಬೇತಿಗೆ ಹಾಜರಾಗುತ್ತಿಲ್ಲ. ಕಾಲೇಜುಗಳಲ್ಲಿ ಪಿಯು ಪರೀಕ್ಷೆಗಳು ಪೂರ್ಣಗೊಂಡಿವೆ. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ವಸತಿ ವ್ಯವಸ್ಥೆಯಿತ್ತು. ಆದರೆ, ಪಿಯು ಪರೀಕ್ಷೆಗಳು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಸಹ ಇಲ್ಲದಂತಾಗಿದೆ. ದೂರದ ಗ್ರಾಮಗಳಿಂದ ಕಾಲೇಜಿಗೆ ಬರಬೇಕು. ಬೆಳಗ್ಗೆಯಿಂದ ಸಂಜೆವರೆಗೆ ಆನ್‌ಲೈನ್ ತರಬೇತಿ ನೀಡಲಾಗುತ್ತದೆ. ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆಯಿಲ್ಲದ ಕಾರಣ ಕೆಲ ವಿದ್ಯಾರ್ಥಿಗಳು ಈ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಸರ್ಕಾರದ ವತಿಯಿಂದ ರಜೆ ದಿನಗಳಲ್ಲಿ ಸಹ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ ಎನ್ನುವ ಮಾತುಗಳು ವಿದ್ಯಾರ್ಥಿ ವಲಯದಲ್ಲಿ ಕೇಳಿ ಬರುತ್ತಿವೆ.
ಕಾರಟಗಿ ತಾಲೂಕಿನ ಸಿದ್ದಾಪುರದ ಪದವಿ ಪೂರ್ವ ಕಾಲೇಜು ಹಾಗೂ ಕಾರಟಗಿ ಪಟ್ಟಣದ ಕೆಪಿಎಸ್ ಕಾಲೇಜಿನಲ್ಲಿ ಸರ್ಕಾರ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಆನ್‌ಲೈನ್ ತರಬೇತಿ ಕಾರ್ಯಕ್ರಮ ನಡೆಸಿಕೊಡುತ್ತಿದೆ. ಕಾರಟಗಿ ಕೆಪಿಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ 122 ವಿದ್ಯಾರ್ಥಿಗಳ ಪೈಕಿ 48 ಮಕ್ಕಳು ಮತ್ತು ದ್ವಿತೀಯ ಪಿಯುಸಿಯಲ್ಲಿ 92ಜನ ವಿದ್ಯಾರ್ಥಿಗಳ ಪೈಕಿ 32 ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ತರಬೇತಿಗೆ ಹಾಜರಾಗುತ್ತಿದ್ದಾರೆ.
ಸಿದ್ದಾಪುರದ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ 20 ವಿದ್ಯಾರ್ಥಿಗಳ ಪೈಕಿ 8 ಮಕ್ಕಳು, ದ್ವಿತೀಯ ಪಿಯು 16ಮಕ್ಕಳ ಪೈಕಿ 10 ವಿದ್ಯಾರ್ಥಿಗಳು ಮಾತ್ರ ತರಬೇತಿಗೆ ಹಾಜರಾಗುತ್ತಿದ್ದಾರೆ. ಕಾರಟಗಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯು ಸೇರಿ 214 ವಿದ್ಯಾರ್ಥಿಗಳಿದ್ದು, ಈ ಪೈಕಿ 80ಮಕ್ಕಳು ತರಬೇತಿಗೆ ಹಾಜರಾಗುತ್ತಿದ್ದು, 134ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ. ಸಿದ್ದಾಪುರದ ಕಾಲೇಜಿನಲ್ಲಿ ಪ್ರಥಮ ಪಿಯು 36 ಹಾಗೂ ದ್ವಿತೀಯ ಪಿಯುನಲ್ಲಿ 16 ಸೇರಿ ಒಟ್ಟು 36 ವಿದ್ಯಾರ್ಥಿಗಳಿದ್ದು, ಈ ಪೈಕಿ 18ಮಕ್ಕಳು ತರಬೇತಿಗೆ ಹಾಜರಾಗುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಪೇಸ್ ಸಂಸ್ಥೆ ನೆರವಿನಡಿ ಆನ್‌ಲೈನ್ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ವೃತ್ತಿಪರ ಕೋರ್ಸ್‌ಗಳಲ್ಲಿ ಉತ್ತಮ ಸಾಧನೆ ಮಾಡಲು ಮಕ್ಕಳು ಇಂತಹ ಕಾರ್ಯಕ್ರಮಗಳ ಉಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು. | ಅನಿಲ್ ಕುಮಾರ್ ಕೆಪಿಎಸ್ ಕಾಲೇಜು ಪ್ರಾಚಾರ್ಯ, ಕಾರಟಗಿ