

ಕಾರಟಗಿ: ಪಟ್ಟಣದ ಆರಾಧ್ಯದೈವ ಕಲಬುರಗಿ ಶ್ರೀಶರಣಬಸವೇಶ್ವರರ 48ನೇ ಪುರಾಣ ಮಹಾಮಂಗಲ ಹಾಗೂ 23ನೇ ವರ್ಷದ ಜೋಡು ರಥೋತ್ಸವ ನಿಮಿತ್ತ ಭಾನುವಾರ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಗಂಗೆಸ್ಥಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಶರಣಬಸವೇಶ್ವರ ಹಾಗೂ ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ತುಂಗಭದ್ರಾ ಎಡದಂಡೆಯ 31ನೇ ಉಪಕಾಲುವೆಯಿಂದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಗಂಗೆಸ್ಥಳ ಮೆರವಣಿಗೆ ಆರಂಭಗೊಂಡಿತು. ಮಹಿಳೆಯರು, ಯುವತಿಯರು ಪೂರ್ಣಕುಂಭ, ಕಳಸದೊಂದಿಗೆ ಪಾಲ್ಗೊಂಡಿದ್ದರು. ಸಕಲವಾದ್ಯ, ನಂದಿಕೋಲು, ಡೊಳ್ಳು, ಕುದುರೆ ಕುಣಿತ, ಪುರವಂತರು ಸೇರಿದಂತೆ ತೃತೀಯ ಲಿಂಗಿಗಳ ಕುಣಿತ ಮೆರವಣಿಗೆಗೆ ಮೆರುಗು ತಂದಿತು. ಕ್ಷತ್ರಿಯ ಸಮುದಾಯದ ಪ್ರಮುಖರು ಜನರಿಗೆ ತಂಪು ಪಾನೀಯಗಳನ್ನು ವಿತರಿಸಿದರು. ಪಟ್ಟಣದ ಎಲ್ಲ ವ್ಯಾಪರಸ್ಥರು ವಹಿವಾಟು ಸ್ಥಗಿತಗೊಳಿಸಿ ಪಾಲ್ಗೊಂಡಿದ್ದರು. ಸುತ್ತಲಿನ ವಿವಿಧ ಗ್ರಾಮಗಳು ಭಕ್ತರು ಭಾಗವಹಿಸಿದ್ದರು. ಅಚ್ಚುಕಟ್ಟಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶರಣಬಸವೇಶ್ವರರ ಪುರಾಣವನ್ನು ಪ್ರವಚನಕಾರ ಎಂ.ಶರಣಯ್ಯ, ಸಂಗೀತ ಮತ್ತು ಪುರಾಣ ಪಠಣ ಮಹಾಂತೇಶ ಹಿರೇಮಠ, ತಬಲಾವಾದಕ ಪಂಚಾಕ್ಷರಿ ಹೂಗಾರ್ ತಂಡ ಮಹಾಮಂಗಲಗೊಳಿಸಿತು. ಹೆಬ್ಬಾಳ ಬೋಳೋಡಿ ಬಸವೇಶ್ವರ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ಹಿರೇಮಠದ ಮರುಳಸಿದ್ದಯ್ಯಸ್ವಾಮಿ, ತಲೇಖಾನ್ ಹಿರೇಮಠದ ವೀರಭದ್ರೇಶ್ವರ ಶರಣ ಸಾನ್ನಿಧ್ಯವಹಿಸಿದ್ದರು. ಸೋಮವಾರ ಸಂಜೆ ಜೋಡು ರಥೋತ್ಸವ ನಡೆಯಲಿದೆ.
ಕುಣಿದು ಕುಪ್ಪಳಿಸಿದ ಶಾಸಕ, ಮಾಜಿ ಸಚಿವ: ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಗಂಗೆಸ್ಥಳ ಮೆರವಣಿಗೆಯಲ್ಲಿ ಡಿಜೆ ಸೌಂಡ್‌ಗೆ ಯುವಕರು ಹೆಜ್ಜೆ ಹಾಕಿದರು. ಶಾಸಕ ಬಸವರಾಜ ದಢೇಸುಗೂರು ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಪ್ರತ್ಯೇಕವಾಗಿ ಅವರ ಬೆಂಬಲಿಗರ ಜತೆಗೂಡಿ ಯುವಕರೊಂದಿಗೆ ಕುಣಿದು ಕುಪ್ಪಳಿಸಿದರು. ಶಾಸಕ ದಢೇಸುಗೂರು ಕಂಬಳಿ ಹೊದ್ದು ಡೊಳ್ಳು ಬಾರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರಿಂದ ಸುಗಮ ಸಂಚಾರ ಕಲ್ಪಿಸಲು ಪಿಐ ವೀರಭದ್ರಯ್ಯ ಹಿರೇಮಠ, ಪಿಎಸ್‌ಐ ತಾರಾಬಾಯಿ ನೇತೃತ್ವದ ಪೊಲೀಸರ ತಂಡ ಹರಸಾಹಸ ಪಟ್ಟಿತು.