

ಕಾರಟಗಿ: ತಾಲೂಕಿನ ಸಿದ್ದಾಪುರ ಹೋಬಳಿಯ ಸಿಂಗನಾಳ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ರೈತರಿಗೆ ಫಾರ್ಮ್ 57ರಡಿ ಭೂ ಮಂಜೂರಾತಿ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶಾಸಕ ಬಸವರಾಜ ದಢೇಸುಗೂರುಗೆ ಭಾನುವಾರ ಸಾಗುವಳಿದಾರರು ಮನವಿ ಸಲ್ಲಿಸಿದರು.
ಸಿಂಗನಾಳ ಗ್ರಾಮದ ಸರ್ವೇ ನಂ. 7,8,9,10, 48,63 ರಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ 28 ಜನ ಅರ್ಜಿದಾರರಿಗೆ ಭೂ ಮಂಜೂರಾತಿ ನೀಡಬೇಕು. ಫಾರ್ಮ್ ನಂ. 50, 53 ರಲ್ಲಿ ಬಗರ್ ಹುಕುಂ ಸಾಗುವಳಿ ಪ್ರಕರಣಗಳನ್ನು ಸಕ್ರಮ ಗೊಳಿಸಲು ಕೋರಿದ್ದು, ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಉಪ ವಿಭಾಗ ಅಧಿಕಾರಿ ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಿ ಅಕ್ರಮ ಸಕ್ರಮ ನ್ಯಾಯಮಂಡಳಿಯಲ್ಲಿ ಮಂಡಿಸಿ ಕ್ರಮ ಕೈಗೊಳ್ಳಲು ಕಾರಟಗಿ ತಹಸೀಲ್ದಾರ್ ಗೆ ಸೂಚಿಸಲಾಗಿದೆ.
ಫಾರ್ಮ್ 57ರ ಪರಿಶೀಲನೆ ವೇಳೆ ಶಾಸಕರು ತಮ್ಮ ಗಮನಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಎಂ.ಬಸವರಾಜ, ಸಾಗುವಳಿದರರಾದ ಹುಲುಗಪ್ಪ, ರಮೇಶ, ಕನಕಪ್ಪ ಸೇರಿ ಇತರರಿದ್ದರು.