ಕೋತಿಗಳ ದಾಳಿಗೆ ಕಂಗಾಲಾದ ಸಿದ್ದಾಪುರ ಗ್ರಾಮಸ್ಥರು

Untitled design (3)
Published on

ಕಾರಟಗಿ: ತಾಲೂಕಿನ ಸಿದ್ದಾಪುರದಲ್ಲಿ ಮಹಿಳೆಯರ ಮೇಲೆ ಕೋತಿಗಳು ಏಕಾಏಕಿ ದಾಳಿ ನಡೆಸುತ್ತಿದ್ದು, ಗ್ರಾಮಸ್ಥರು ಭಯಭೀಥರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಕೋತಿಗಳು ದಾಳಿ ನಡೆಸುತ್ತಿವೆ. ಹೀಗಾಗಿ ಮಹಿಳೆಯರು ಮನೆಯಿಂದ ಹೊರ ಬರಲು ಹಾಗೂ ಮಾಳಿಗೆಯ ಮೇಲೆ ಕೆಲಸಗಳನ್ನು ಮಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಸೊಂಡಿಗೆ ಹಾಕಲು, ಬಟ್ಟೆ ಒಣಗಿಸಲು, ದವಸ- ಧಾನ್ಯಗಳು, ಕಿರಾಣಿ ತರಲು ಹಾಗೂ ಪಡಿತರ ಪಡಿಯಲು ಸೇರಿ ಇತರ ಕೆಲಸಗಳಿಗೆ ಹೊರಬರಲು ಅಂಜಿಕೆ ಪಡುವಂತಾಗಿದೆ. ಈಗಾಗಲೇ ಮಹಿಳೆಯರಿಗೆ ಕೋತಿಗಳು ಕಚ್ಚಿ, ಪರಚಿವೆ. ಇದಕ್ಕೂ ಮುನ್ನ ಗ್ರಾಮದಲ್ಲಿ ಹುಚ್ಚು ಕೋತಿಯೊಂದು ಮಹಿಳೆಯರ ಮೇಲೆ ನಿರಂತರವಾಗಿ ದಾಳಿ ನಡೆಸಿತ್ತು. ಆಗಲೂ ಸಹ ಅನೇಕ ಮಹಿಳೆಯರು ಗಾಯಗೊಂಡಿದ್ದರು. ಕಳೆದ ಕೆಲ ತಿಂಗಳು ಕಾಲ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಗ್ರಾಮದಲ್ಲಿ ಮಂಗಗಳ ಹಾವಳಿ ಮುಂದುವರಿದಿದೆ. ಕೋತಿಗಳ ಹಾವಳಿ ಕೈ ಮೀರುವ ಮುನ್ನ ಕೋತಿಗಳನ್ನು ಸರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೋತಿಗಳ ದಾಳಿಯಿಂದ ಗ್ರಾಮದಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಮಹಿಳೆಯರ ಮೇಲೆ ಈಗಾಗಲೇ ಕೋತಿಗಳು ದಾಳಿ ನಡೆಸಿ, ಗಾಯಗೊಳಿಸಿವೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರವೇ ಕ್ರಮವಹಿಸಿ, ಮಂಗಗಳನ್ನು ಸೆರೆಹಿಡಿಯಬೇಕಿದೆ.

ಮಲ್ಲಿಕಾರ್ಜುನ ರೆಡ್ಡಿ ಕಲ್ಮಂಗಿ

ಸಿದ್ದಾಪುರ ಗ್ರಾಮಸ್ಥ

ಕೋತಿಗಳನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಬೇಕು. ಗ್ರಾಪಂನಿಂದ ಪತ್ರ ತರಿಸಿಕೊಂಡು ಶೀಘ್ರವೇ ಕೋತಿಗಳ ಸೆರೆಹಿಡಿಯಲು ಸೂಚಿಸಲಾಗುವುದು. ಈ ಸಂಬಂಧ ಪಿಡಿಒ ಜತೆಗೆ ಮಾತನಾಡಿ ಕ್ರಮವಹಿಸಲಾಗುವುದು.

ಲಕ್ಷ್ಮೀದೇವಿ

ತಾಪಂ ಇಒ ಕಾರಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net