ಬತ್ತಿದ ಬೋರ್‌ವೆಲ್‌ಗಳಿಗೆ ಭರ್ಜರಿ ಸಿಂಗಾರ!

Karatagi borwell
ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ನಿರುಪಯುಕ್ತ ಬೋರ್‌ವೆಲ್ ಸುತ್ತ ಕಟ್ಟೆ ನಿರ್ಮಿಸಿರುವುದು.
Published on

ನೀರೆತ್ತದ ಕೊಳವೆಬಾವಿ ಬಳಸಿ ಬಿಲ್ ಎತ್ತುವಳಿ | ಜಿಪಂ ಅನಿರ್ಬಂಧಿತ ಅನುದಾನ ದುರ್ಬಳಕೆ ಶಂಕೆ

ಶರಣಪ್ಪ ಕೃಷ್ಣಾಪುರಕಾರಟಗಿ: ತಾಲೂಕು ವ್ಯಾಪ್ತಿಯಲ್ಲಿರುವ ಉಪಯೋಗಕ್ಕೆ ಯೋಗ್ಯವಲ್ಲದ ಹಾಗೂ ನೀರನ್ನೆತ್ತದ ಬೋರ್‌ವೆಲ್‌ಗಳಿಂದ ಬಿಲ್ ಎತ್ತುವಳಿ ಮಾಡಲು ಮುಂದಾಗಿರುವ ಅಂಶ ಬೆಳಕಿಗೆ ಬಂದಿದೆ.

ಹೌದು, 2024-25ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಜಿಲ್ಲಾ ಪಂಚಾಯಿತಿ ಅನುದಾನದ ಬೇಕಾಬಿಟ್ಟಿ ಬಳಕೆಗೆ ಪಿಆರ್‌ಇಡಿ ವಿಭಾಗದ ಮುಂದಾಗಿದೆ. ಈಗಾಗಲೇ ತಾಲೂಕು ವ್ಯಾಪ್ತಿಯ ವಿವಿಧೆಡೆ ಈ ಕಾಮಗಾರಿಗಳು ಮುಕ್ತಾಯ ಹಂತ ತಲುಪಿವೆ.

ಸರ್ಕಾರಿ ಕೆಲಸಗಳೆಂದರೆ ಹಾಗೆಯೇ ಬೇಕಾಬಿಟ್ಟಿ ಕಾಮಗಾರಿ ಮಾಡಿ, ಭರಪೂರ ಬಿಲ್ ಪಡೆಯುತ್ತಾರೆ ಎನ್ನುವ ಮನೋಭಾವ ಸಾರ್ವಜನಿಕ ವಲಯದಲ್ಲಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಅನುದಾನದಲ್ಲಿ ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳಿಗೆ ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ಜಿಪಂ ಮುಂದಾಗಿದೆ. ಅದು, ಒಂದಲ್ಲ ಎರಡಲ್ಲ ಬರೋಬ್ಬರಿ 10.80 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೋರ್‌ವೆಲ್‌ಗಳಿಗೆ ಕಟ್ಟೆಗಳನ್ನು ಕಟ್ಟಲು ಯೋಜನೆ ಸಿದ್ಧಪಡಿಸಿದ್ದು, ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಬೇಸಿಗೆ ಆರಂಭಕ್ಕೂ ಮುನ್ನವೇ ಉರಿ ಬಿಸಿಲು ಸಾರ್ವಜನಿಕರನ್ನು ಹೈರಾಣಾಗಿಸಿದೆ. ತಾಲೂಕಿನ ಅನೇಕ ಗ್ರಾಮಗಳಿಗೆ ನಾಲ್ಕೈದು ದಿನಗಳಿಗೊಮ್ಮೆ ಕುಡಿವ ನೀರು ಬಿಡಲಾಗುತ್ತಿದೆ. ತಾಲೂಕಿನ ಕೆಲ ಹಳ್ಳಿಗಳಲ್ಲಿ ಕುಡಿವ ನೀರಿನ ಬವಣೆ ಇನ್ನೂ ಶಾಶ್ವತವಾಗಿ ನೀಗಿಲ್ಲ. ಪರಿಸ್ಥಿತಿ ಹೀಗಿರುವಾಗ ಸಾರ್ವಜನಿಕರ ಉಪಯೋಗಕ್ಕಿಲ್ಲದ, ತುಕ್ಕು ಹಿಡಿದಿರುವ ಬೋರ್‌ವೆಲ್‌ಗಳಿಗೆ ಸಿಂಗಾರ ಮಾಡಿ, ಬಿಲ್ ಎತ್ತುವಳಿಗೆ ಮುಂದಾಗಿರುವುದು ಗುತ್ತಿಗೆದಾರರ ಜತೆಗೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಿವೆ.

ಕರೆ ಸ್ವೀಕರಿಸದ ಎಇಇ:

ಬಳಕೆಗೆ ಬಾರದ ಹಾಗೂ ತುಕ್ಕು ಹಿಡಿದಿರುವ ಬೋರ್‌ವೆಲ್‌ಗಳಿಗೆ ಕಟ್ಟೆ ಕಟ್ಟಿ ಬಿಲ್ ಎತ್ತುವಳಿ ವಿಚಾರಕ್ಕೆ ಸಂಬಂಧಿಸಿದಂತೆ ಗಂಗಾವತಿ ಪಿಆರ್‌ಇಡಿ ಎಇಇ ವಿಜಯ ಕುಮಾರ್ ಅವರನ್ನು ಪ್ರತಿಕ್ರಿಯೆಗೆ ವಿಜಯವಾಣಿಯಿಂದ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅನೇಕ ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತುಕ್ಕು ಹಿಡಿದರೂ ಡೋಂಟ್ ಕೇರ್

ಮಾರ್ಚ್ ತಿಂಗಳ ಆರಂಭದಿಂದಲೇ ಸೂರ್ಯನ ಪ್ರಖರತೆ ಹೆಚ್ಚಿದೆ. ಜನರಿಗೆ ನೀರಿನ ಅವಶ್ಯಕತೆಯಿದೆ. ಆದರೆ, ತಾಲೂಕು ವ್ಯಾಪ್ತಿಯಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ಕೈಕೊಟ್ಟಿವೆ. ಇದರಿಂದ ಖಾಸಗಿ ಆರ್‌ಒ ಪ್ಲಾೃಂಟ್‌ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರ ಬವಣಿ ನೀಗಿಸುವ ನಿಟ್ಟಿನಲ್ಲಿ ಅಧಿಕಾರ ವರ್ಗ ಶ್ರಮಿಸಬೇಕಿತ್ತು. ಆದರೆ, ನೀರೆತ್ತದ ಮತ್ತು ತುಕ್ಕು ಹಿಡಿದ ಬೋರ್‌ವೆಲ್‌ಗಳಿಗೆ ಪ್ಲಾರ್ಟ್‌ಫಾರ್ಮ್ ನಿರ್ಮಾಣ ಮಾಡಿ ಮಾರ್ಚ್ ತಿಂಗಳ ಅಂತ್ಯದಲ್ಲಿ ಬಿಲ್ ಎತ್ತುವಳಿಗೆ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆಹಿಡಿದ ಕೈಗನ್ನಡಿಯಾಗಿದೆ.

₹10.80 ಲಕ್ಷ ಬಳಕೆ

ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಗಳಲ್ಲಿ ಬೋರ್‌ವೆಲ್‌ಗಳಿಗೆ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಬರೋಬ್ಬರಿ 10.80 ಲಕ್ಷ ರೂ. ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಬರಗೂರು ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಬೋರ್‌ವೆಲ್‌ಗಳಿಗೆ ಪ್ಲಾಟ್ ಫಾರ್ಮ್ ನಿರ್ಮಾಣಕ್ಕೆ 1.4 ಲಕ್ಷ ರೂ. ನಿಗದಿ ಮಾಡಲಾಗಿದೆ. ಇದರಂತೆ ಬೂದಗುಂಪಾದಲ್ಲಿ 16 ಸಾವಿರ ರೂ., ಬೆನ್ನೂರಿನಲ್ಲಿ 80 ಸಾವಿರ ರೂ., ಬೇವಿನಾಳದಲ್ಲಿ 32 ಸಾವಿರ ರೂ., ಚಳ್ಳೂರಿನಲ್ಲಿ 72 ಸಾವಿರ ರೂ., ಗುಂಡೂರು 72 ಸಾವಿರ ರೂ., ಹುಳ್ಕಿಹಾಳ 8 ಸಾವಿರ ರೂ., ಮರ್ಲಾನಹಳ್ಳಿ 80 ಸಾವಿರ ರೂ., ಯರಡೋಣ 1.28 ಲಕ್ಷ ರೂ., ಮುಸ್ಟೂರು 1.28 ಲಕ್ಷ ರೂ., ಮೈಲಾಪುರ 64 ಸಾವಿರ ರೂ., ಸಿದ್ದಾಪುರ 96 ಸಾವಿರ ರೂ. ಸೇರಿ ಒಟ್ಟು 10.80 ಲಕ್ಷ ರೂ. ಅನುದಾನ ನಿಗದಿ ಮಾಡಲಾಗಿದೆ.

ಸಾವಿರಾರು ರೂ. ಒಳಗೆ ಪೂರ್ಣಗೊಂಡ ಕಟ್ಟೆ

ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬೋರ್‌ವೆಲ್‌ಗಳಿಗೆ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಒಂದಕ್ಕೆ 8 ಸಾವಿರ ರೂ. ನಿಗದಿ ಮಾಡಲಾಗಿದೆ. ಆದರೆ, ಪ್ರಸ್ತುತದಲ್ಲಿ ನಿರ್ಮಾಣ ಮಾಡಿರುವ ಬೋರ್‌ವೆಲ್ ಕಟ್ಟೆಗಳಿಗೆ ಕೇವಲ 1 ರಿಂದ 2 ಸಾವಿರ ರೂ. ಒಳಗೆ ವ್ಯಯವಾಗಿದೆ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಈಗಾಗಲೇ ನಾನು ಎಇಇ ಜತೆ ಮಾತನಾಡಿದ್ದೇನೆ. ನನಗೆ ಅವರು ಕೆರೆ ಒಳಗಡೆ ಇರುವ ಬೋರ್‌ವೆಲ್ ಹಾಗೂ ಊರಿನಲ್ಲಿರುವ ಕೊಳವೆಬಾವಿಗಳ ಸುತ್ತ ರೌಂಡ್ ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಇದಿಷ್ಟೇ ನನಗೆ ಗೊತ್ತಿದ್ದು, ಹೆಚ್ಚಿನ ಮಾಹಿತಿ ಎಇಇ ವಿಜಯಕುಮಾರ್ ಬಳಿ ಇದೆ. | ಸತ್ಯಪ್ಪಇಇ, ಪಿಆರ್‌ಇಡಿ ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net