ಶರಣಬಸವೇಶ್ವರ ದೇವಸ್ಥಾನದಲ್ಲಿ ಪುರಾಣ ಆಲಿಸಿದ ಮುಸ್ಲಿಮರು

Untitled design (22)
ಕಾರಟಗಿಯಲ್ಲಿ ಶರಣಬಸವೇಶ್ವರರ ಚರಿತಾಮೃತ ಪುರಾಣ ಪ್ರವಚನ ಆಲಿಸಲು ಆಗಮಿಸಿದ್ದ ಮುಸ್ಲಿಂ ಧರ್ಮಗುರುಗಳಾದ ಸಾಧೀಕ್‌ಸಾಬ್, ಗುಲಾಮ್ ಹುಸೇನ್ ಖಾಜಿಯವರನ್ನು ದೇವಸ್ಥಾನದ ಸಮಿತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಹಿರೇಮಠದ ವೇ.ಮೂ.ಮರುಳಸಿದ್ದಯ್ಯಸ್ವಾಮಿ, ಪುರಾಣ ಪ್ರವಚನಕಾರ ಸಿದ್ದೇಶ್ವರ ಶಾಸ್ತ್ರೀಗಳು ಹಿರೇಮಠ, ಪ್ರಮುಖರಾದ ಗುಂಡಪ್ಪ ಕುಳಗಿ, ಶರಣಪ್ಪ ಗದ್ದಿ, ಜಗದೀಶಪ್ಪ ಅವರಾದಿ, ವೀರೇಶಯ್ಯಸ್ವಾಮಿ ಗಣಾಚಾರಿ ಸಿದ್ರಾಮಪ್ಪ ಪಲ್ಲೇದ್, ಅಮರೇಗೌಡ, ವೀರೇಶ ಕೊಟಗಿ, ವಿಶ್ವನಾಥ ಕಟಾಂಬ್ಲಿ ಇತರರಿದ್ದರು.
Published on

ಕಾರಟಗಿ: ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 50ನೇ ವರ್ಷದ ಕಲಬುರಗಿ ಶರಣಬಸವೇಶ್ವರರ ಚರಿತಾಮೃತ ಪುರಾಣ ಪ್ರವಚನ ಆಲಿಸಲು ಭಾನುವಾರ ಸಂಜೆ ಮುಸ್ಲಿಂ ಬಾಂಧವರು ಆಗಮಿಸಿ ಭಾವೈಕ್ಯತೆ ಮೆರೆದರು.

24ನೇ ದಿನದ ಪುರಾಣದಲ್ಲಿ ಕಲಬುರಗಿ ಶರಣಬಸವೇಶ್ವರರು ಮತ್ತು ಅವರ ಸಮಕಾಲಿನ ಸೂಫಿ ಸಂತ ಖ್ವಾಜಾ ಬಂದೇನವಾಜ್‌ರ ಸಮಾಗಮ ಸನ್ನಿವೇಶ ಇರುವುದರಿಂದ ಸೆ.8ರಂದು ಪಟ್ಟಣದ ಮುಸ್ಲಿಂ ಬಾಂಧವರನ್ನು ಪುರಾಣ ಪ್ರವಚನಕ್ಕೆ ಆಹ್ವಾನಿಸುವಂತೆ ಪ್ರವಚನಕಾರ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ ದೇವಸ್ಥಾನದ ಸಮಿತಿಯವರಿಗೆ ತಿಳಿಸಿದ್ದರು. ಹಾಗಾಗಿ ಸಮಿತಿಯವರು ಮುಸ್ಲಿಂ ಸಮುದಾದವರಿಗೆ ಮಾಹಿತಿ ನೀಡುತ್ತಿದ್ದಂತೆ ಧರ್ಮಗುರುಗಳಾದ ಸಾಧೀಕ್‌ಸಾಬ್, ಗುಲಾಮ್ ಹುಸೇನ್ ಖಾಜಿ ಹಾಗೂ ಪ್ರಮುಖರ ನೇತೃತ್ವದಲ್ಲಿ ಅನೇಕರು ಪ್ರವಚನಕ್ಕೆ ಆಗಮಿಸಿದರು.

ಝಖ್ವ್ಜಾ ಬಂದೇನವಾಜರ ಉರುಸು ಹಿನ್ನಲೆಯಲ್ಲಿ ತೇಯ್ದ ಗಂಧವನ್ನು ಹಚ್ಚುವ ವೇಳೆ ಶರಣಬಸವೇಶ್ವರರು ದರ್ಗಾಕ್ಕೆ ಆಗಮಿಸಲಿದ್ದಾರೆ. ಆಗ ಮುಸ್ಲಿಂ ಸಮುದಾದವರು ಅವರನ್ನು ಆಚೆಯೇ ನಿಲ್ಲಿಸಿ ಬಂದೇನವಾಜರಿಗೆ ಗಂಧ ಹಚ್ಚಲಿದ್ದಾರೆ. ಗಂಧ ಹಚ್ಚುವ ಸ್ಥಳದಲ್ಲಿ ಪ್ರತ್ಯಕ್ಷರಾಗುವ ಶರಣಬಸವೇಶ್ವರರು ಕೆಲ ಸ್ಥಳದಲ್ಲಿ ಗಂಧ ಹಚ್ಚುವುದನ್ನು ಬಿಟ್ಟಿರುವುದಾಗಿ ತಿಳಿಸುತ್ತಾರೆ. ಇಂತಹ ಪವಾಡ ಕಂಡ ಮುಸ್ಲಿಮರು ಶರಣಬಸವೇಶ್ವರರಲ್ಲಿ ಕ್ಷಮೆಯಾಚಿಸಿ ದರ್ಗಾದೊಳಗೆ ಕರೆದೊಯ್ಯುತ್ತಾರೆ. ಅಂದಿನಿಂದ ಇಂದಿಗೂ ಕಲಬುರಗಿಯಲ್ಲಿ ಶರಣಬಸವೇಶ್ವರರ ಜಾತ್ರೆ ಆರಂಭವಾಗುವ ಮುನ್ನ ದಿವಟಿಗೆಗಳು ಬಂದೇ ನವಾಜರ ದರ್ಗಾದಿಂದ ಬರುತ್ತವೆ ಮತ್ತು ಬಂದೇನವಾಜರ ಉರುಸು ಆರಂಭವಾಗುವ ಮುನ್ನ ಶರಣಬಸವೇಶ್ವರರ ದೇವಸ್ಥಾನದಿಂದ ತೇಯ್ದ ಗಂಧ ತೆಗೆದುಕೊಂಡು ಹೋಗಲಾಗುತ್ತದೆ. ಇಷ್ಟೇ ಅಲ್ಲದೇ ಇಬ್ಬರು ಸಂತರ ಸ್ನೇಹದ ಗುರುತಾಗಿ ಹಿಂದು-ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿ ಕೆಲವು ಸಂಪ್ರದಾಯಗಳು ಇಗಲು ಉಳಿದಿವೆ ಎಂದು ಪ್ರವಚನಕಾರರು ಪುರಾಣದ ಸನ್ನಿವೇಶವನ್ನು ಹೇಳಿದರು.

ಬಳಿಕ ಮುಸ್ಲಿಂ ಸಮುದಾಯದ ಬಾಲಕ ಅಬ್ದುಲ್ ರಶೀದ್ ಹಾಡಿದ ಭಕ್ತಿಗೀತೆ ಎಲ್ಲರ ಮನಸೊರೆಗೊಳಿಸಿತು. ಪುರಾಣ ಪ್ರವಚನಕಾರರು, ದೇವಸ್ಥಾನ ಸಮಿತಿ ಪದಾಧಿಕಾರಿಗಳಿಗೆ ಮುಸ್ಲಿಂ ಬಾಂಧವರು ಸನ್ಮಾನಿಸಿದರು. ದೇವಸ್ಥಾನ ಸಮಿತಿಯಿಂದ ಮುಸ್ಲಿಂ ಧರ್ಮಗುರುಗಳು ಹಾಗೂ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಪ್ರಸಾದದ ವ್ಯವಸ್ಥೆ ಮಾಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net