

ಕಾರಟಗಿ: ಪಟ್ಟಣದ ಜೆಪಿ ನಗರದ ಶ್ರೀದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಮಹಿಳೆಯರಿಂದ ಶ್ರೀದೇವಿ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಕಳೆದ 9 ದಿನ ವಿಶೇಷ ಪೂಜಾದಿ ಧಾರ್ಮಿಕ ಕಾರ್ಯಕ್ರಮ ನಡೆದವು. ರಥೋತ್ಸವ ಪ್ರಯುಕ್ತ ಬೆಳಗ್ಗೆ ಮಡಿತೇರು ಎಳೆಯಲಾಯಿತು. ಸಂಜೆ ರಥವನ್ನು ಮಹಿಳೆಯರು ಎಳೆದರು. ತೇರು ನವಲಿ ರಸ್ತೆ, ಕನಕದಾಸ ವೃತ್ತದ ಎದುರು ಬಸವಣ್ಣ ಪಾದಗಟ್ಟೆಯವರೆಗೆ ಸಾಗಿ ವಾಪಸ್ ದೇವಸ್ಥಾನ ತಲುಪಿತು. ಅಲ್ಲದೇ, ಮಹಿಳೆಯರೇ ಪಲ್ಲಕ್ಕಿ ಹೊತ್ತು ಗಮನ ಸೆಳೆದರು. ಭಕ್ತರು ಬಾಳೆಹಣ್ಣು, ಉತ್ತತ್ತಿಗಳನ್ನು ರಥಕ್ಕೆ ಸಮರ್ಪಿಸಿ ಜಯಘೋಷ ಕೂಗಿ ಸಂಭ್ರಮಿಸಿದರು.
ಅರ್ಚಕ ಕೆ.ಎಂ.ಚನ್ನಬಸಯ್ಯ ಶಾಸ್ತ್ರಿ ನೇತೃತ್ವದಲ್ಲಿ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ, ಅಲಂಕಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು.