ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೂಚನೆ

seepage problem
ಕಾರಟಗಿ ತಾಲೂಕಿನ ನಾಗನಕಲ್ ಬಳಿಯಿರುವ ಬಹುಗ್ರಾಮ ಕುಡಿವ ನೀರು ಪೂರೈಕೆಯ ಕೆರೆಗೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಇಇ ಮಹೇಶ ಶಾಸ್ತ್ರಿ, ಎಇಇ ದೇವಣ್ಣ ಕಟ್ಟಿ ಹಾಗೂ ಡಿಸೈನ್ ಇಂಜಿನಿಯರ್ ರಮೇಶ ಬಾಬು ಇದ್ದರು.
Published on

ಕಾರಟಗಿ: ತಾಲೂಕಿನ ನಾಗನಕಲ್ ಗ್ರಾಮದ ಬಳಿಯಿರುವ ಬಹುಗ್ರಾಮ ಕುಡಿವ ನೀರಿನ ಕೆರೆಗೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕೆರೆನೀರು ಶುದ್ಧೀಕರಿಸುವ ಕ್ಲಾರಿಪ್ಲಕುಲೇಟರ್‌ದಲ್ಲಿ (ನೀರು ಸಂಸ್ಕರಣಾ ಘಟಕ) ಸೀಪೇಜ್ ಸಮಸ್ಯೆ ಕಾಣಿಸಿಕೊಂಡಿದ್ದು, ವರ್ಷದ ಹಿಂದೆಯೇ ಸಿಂಕ್ ಆಗಿದೆ ಎನ್ನಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿ ಸುರೇಶ ಇಟ್ನಾಳ ಹಾಗೂ ಜಿಪಂ ಸಿಇಒ ನೇಗಿ ಅವರು, ಸಮಸ್ಯೆ ಪರಿಹಾರದ ಕುರಿತು ಸ್ಥಳದಲ್ಲಿದ್ದ ಗ್ರಾಮೀಣ ನೀರು ಸರಬರಾಜು ಇಲಾಖೆಯ ಇಇ ಮಹೇಶ ಶಾಸ್ತ್ರಿ, ಎಇಇ ದೇವಣ್ಣ ಕಟ್ಟಿ ಹಾಗೂ ಡಿಸೈನ್ ಇಂಜಿನಿಯರ್ ರಮೇಶ ಬಾಬು ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಿದರು.

ಕೆರೆಯ ನೀರನ್ನು ಪೂರ್ತಿ ಖಾಲಿ ಮಾಡಿ ಸೀಪೇಜ್ ಕಂಡುಹಿಡಿದು ಕ್ಲಾರಿಪ್ಲಕುಲೇಟರ್ ಬಳಿ ಟ್ರೀಟ್‌ಮೆಂಟ್ ಮಾಡಬೇಕಿದೆ. ಸಾಧಾರಣವಾಗಿ ನೀರು ಬರುವುದಕ್ಕಿಂತ ಜಾಸ್ತಿ ಪ್ರೆಷರ್ ಸೃಷ್ಟಿ ಮಾಡಿದರೆ ಸಮಸ್ಯೆ ಮೂಲ ದೊರಕಲಿದೆ. ನಂತರ ಫ್ಲಿಪ್ ಪ್ರೆಷರ್ ಮೂಲಕ 50 ಸೆಂ.ಮೀ.ನಷ್ಟು ಸ್ಟೀಲ್ ಹಾಗೂ ರ‌್ಯಾಪ್ ಮ್ಯಾಟ್ ಹಾಕಿ ಸೀಪೇಜ್ ನಿಲ್ಲಿಸಿ ಸಿಂಕ್ ಆಗದಂತೆ ತಡೆಯಲು ಸಾಧ್ಯವಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪ್ರತಿಕ್ರಿಯಿಸಿ, ಕ್ಲಾರಿಪ್ಲಕುಲೇಟರ್ ಬಳಿ ಕಾಣಿಸಿಕೊಂಡಿರುವ ಸೀಪೇಜ್‌ನಿಂದಾಗಿ ನೀರು ಶುದ್ಧೀಕರಣ ಹಂತದಲ್ಲಿ ತೊಂದರೆಯಾಗಲಿದ್ದು, ಕೂಡಲೇ ಸೀಪೇಜ್ ನಿಯಂತ್ರಣಕ್ಕೆ ಹಾಗೂ ಸಿಂಕ್ ಆಗುತ್ತಿರುವ ಸಮಸ್ಯೆಗೆ ಟ್ರೀಟ್‌ಮೆಂಟ್ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಕೆರೆಯ ದಡವನ್ನು ಮುಟ್ಟದಂತೆ ಹಾಗೂ ತ್ವರಿತಗತಿಯಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಅಂದಾಜು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.

ತಾತ್ಕಾಲಿಕವಾಗಿ ಕೆರೆಯಲ್ಲಿ ಕೂಡಲೇ ಮರಳು ಸಂಸ್ಕರಣೆ ಮಾಡಬೇಕಿದ್ದು, ಕೆರೆಯಲ್ಲಿನ ಮಣ್ಣನ್ನು ತೆಗೆದು ಹೊಸ ಮರಳನ್ನು ಹಾಕಿ ಕ್ಲೋರಿನೇಷನ್ ಮಾಡಿದ ಬಳಿಕ ನೀರು ಸಂಗ್ರಹಿಸಿ ಶುದ್ಧೀಕರಣಗೊಳಿಸಿ ಗ್ರಾಮಗಳಿಗೆ ಪೂರೈಸುವಂತೆ ತಿಳಿಸಿದರು. ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಸೆಕ್ಷನ್ ಅಧಿಕಾರಿಗಳಾದ ನಾಗರಾಜ ಸತೀಶ, ಸುರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net