

ಕಾರಟಗಿ: ಕನ್ನಡ ಹೃದಯದ ಭಾಷೆಯಾಗಿದೆ. ಇಂಗ್ಲಿಷ್ ಹಾವಳಿ ಹೆಚ್ಚುತ್ತಿರುವ ಆತಂಕದ ದಿನಗಳಲ್ಲಿ ನಾವೆಲ್ಲರೂ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಕಸಾಪದಿಂದ ಭಾನುವಾರ ದಾಸೋಹಮೂರ್ತಿ ಶ್ರೀ ಶರಣಬಸವೇಶ್ವರ ಮಹಾವೇದಿಕೆಯಲ್ಲಿ ಆಯೋಜಿಸಿದ್ದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಉಳಿಸಲು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸಾಧ್ಯವಿದೆ. ಜನರು ಕನ್ನಡ ಶಾಲೆಗಳ ಸಬಲೀಕರಣಕ್ಕೆ ಆಡಳಿತ ಯಂತ್ರವನ್ನು ಕರೆದೊಯ್ಯಬೇಕು. ಕನ್ನಡ ಕೇವಲ ರಾಜ್ಯ ಭಾಷೆ, ಸಂವಹನ ಭಾಷೆಯಷ್ಟೇ ಅಲ್ಲ. ಹೃದಯದ ಭಾಷೆಯಾಗಿದೆ. ಹೀಗಾಗಿ ಸಮ್ಮೇಳನಗಳಿಂದ ಕನ್ನಡವನ್ನು ಮತ್ತಷ್ಟು ಜೀವಚೇತನಗೊಳಿಸಬೇಕು ಎಂದರು.
ಹಿರಿಯ ಸಾಹಿತಿ ಎಸ್.ವಿ.ಪಾಟೀಲ್ ಗುಂಡೂರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ಜಾತಿ, ಉಪಜಾತಿ, ಒಳಜಾತಿಗಳ ಸಂಕೋಲೆಗೆ ಸಿಲುಕಿದ್ದು, ನಮ್ಮ ಕರ್ಮ. ಈ ಭಾಗವನ್ನು ಸರ್ಕಾರ ನಿರ್ಲಕ್ಷಿಸುತ್ತಿದ್ದು, ಗಮನಿಸಬೇಕಿದೆ. 371ನೇ ಕಲಂ ನಡಿ ಮೂರು ಅಕಾಡೆಮಿಗಳಿಗೆ ನೇಮಕಾತಿ ವಿಷಯದಲ್ಲಿ ಮನವಿಪತ್ರವೂ ಸ್ವೀಕರಿಸದೆ ನಮ್ಮನ್ನು ಅಸ್ಪಶ್ಯರಂತೆ ನಡೆಸಿಕೊಳ್ಳಲಾಯಿತು. ಈ ಭಾಗದ ಅಭಿವೃದ್ಧಿಗೆ ಈಗಲೇ ಸನ್ನದ್ಧರಾಗುವುದೇನು ಬೇಕಿಲ್ಲ, ಕೇವಲ ಮನವಿಪತ್ರ ಸ್ವೀಕರಿಸಲಿ ಸಾಕು ಎಂದು ಖೇದ ವ್ಯಕ್ತಪಡಿಸಿದರು.
ತಾಪಂ ಉಪಾಧ್ಯಕ್ಷೆ ಶೋಭಾ ಬಸವರಾಜ, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರಗೌಡ ಯರಡೋಣಾ, ವಿಶೇಷ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಉಪಾಧ್ಯಕ್ಷ ಸುರೇಶಪ್ಪ ನಾಡಿಗೇರ್, ಸದಸ್ಯ ನಾಗರಾಜ ಅರಳಿ, ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ, ಪ್ರಮುಖರಾದ ಗದ್ದೆಪ್ಪ ನಾಯಕ, ಚನ್ನಬಸಪ್ಪ ಸುಂಕದ್, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕು ಅಧ್ಯಕ್ಷ ಚನ್ನಬಸಪ್ಪ ಇತರರಿದ್ದರು.
ಒಗ್ಗಟ್ಟಾಗಿ ಕೆಲಸ ಮಾಡುವುದು ಅಗತ್ಯ: ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ನುಡಿಗಳನ್ನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಶಾಸಕ ಬಸವರಾಜ ದಢೇಸೂಗೂರು, ಯಾವುದೇ ಸರ್ಕಾರ ಬಂದರೂ ಜನತೆಯ ಕೆಲಸಗಳಿಗಾಗಿ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಸರ್ಕಾರವೂ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದೆ. ನವಲಿ ಬಳಿ ಸಮಾನಾಂತರ ಜಲಾಶಯದ ನಿರ್ಮಾಣದ ಉದ್ದೇಶದಿಂದ ಕೆಲಸ ಆರಂಭಿಸಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ನೆಲ, ಜಲ, ಜನರನ್ನು ಗುರುತಿಸಿರುವ ಸರ್ಕಾರ ನಿರುದ್ಯೋಗ, ಬಡತನ, ಗುಳೆಯಂತಹ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನ ನಡೆಸಿದೆ ಎಂದು ತಿಳಿಸಿದರು.
ಜನರ ಗಮನಸೆಳೆದ ಮೆರವಣಿಗೆ: ಪಟ್ಟಣದಲ್ಲಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಾಪಂ ಅಧ್ಯಕ್ಷ ಪ್ರಕಾಶ ಬಾವಿ ಭಾನುವಾರ ಚಾಲನೆ ನೀಡಿದರು. ಶಾಸಕ ಬಸವರಾಜ ದಢೇಸೂಗೂರು ರಾಷ್ಟ್ರಧ್ವಜಾರೋಹಣ, ಪರಿಷತ್‌ನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಹಾಗೂ ಕನ್ನಡ ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷ ಚನ್ನಬಸಪ್ಪ ವಕ್ಕಳದ ನೆರವೇರಿಸಿದರು.
ಬೆಳಗ್ಗೆ 9ಗಂಟೆ ನಾನಾ ಕಲಾತಂಡಗಳ ಸಾರಥ್ಯದಲ್ಲಿ ಪೂರ್ಣಕುಂಭ-ಕಳಸ ಹೊತ್ತ ಮಹಿಳೆಯರೊಂದಿಗೆ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ದು ಯಾಪಲಪರ್ವಿ ಅವರ ಮೆರವಣಿಗೆ ಆರಂಭವಾಯಿತು. ನಾನಾ ಭಾಗದ ಮಹಿಳೆಯರ ಡೊಳ್ಳು ಕುಣಿತ, ಸಿದ್ದಾಪುರ ಗ್ರಾಮದ ಹಗಲುವೇಷಧಾರಿಗಳು, ಜಾನಪದ, ಬಾಜಾ-ಭಜಂತ್ರಿ ನಾಡಿನ ಏಳಿಗೆಗೆ ಶ್ರಮಿಸಿದ ಮಹಾತ್ಮರ, ಹೋರಾಟಗಾರರ ಛದ್ಮವೇಷದಲ್ಲಿ ವಿದ್ಯಾರ್ಥಿಗಳು, ವಿವಿಧ ಕಲಾ ತಂಡಗಳಿಂದ ಕೂಡಿದ ಮೆರವಣಿಗೆ ಜನರ ಗಮನಸೆಳೆಯಿತು.