ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲದು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

UDGHATANAE
ಕಾರಟಗಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಸಚಿವ ಶಿವರಾಜ ತಂಗಡಗಿ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಶಿವರಾಮನಗೌಡ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಮುಖಂಡರಾದ ಚನ್ನಬಸಪ್ಪ ಸುಂಕದ, ಬಸವರಾಜ ಕ್ಯಾವಟರ್ ಇತರರಿದ್ದರು.
Published on

ಕಾರಟಗಿ: ಸದೃಢ ಸಮಾಜ ನಿರ್ಮಾಣ ಮಾಡುವುದೇ ಸ್ವಾಮೀಜಿಗಳ ಕೆಲಸವಾಗಿದೆ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕೆರೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಚಮಸಾಲಿ ಸಮುದಾಯದ ಕೂಡಲಸಂಗಮ ಪೀಠ, ಹರಿಹರ ಪೀಠಗಳ ನಡುವೆ ಭಿನ್ನಾಭಿಪ್ರಾಯಗಳಿಲ್ಲ. ನಾವಿಬ್ಬರೂ ಸೇರಬೇಕು ಎನ್ನುವುದು ಜನರ ಅಪೇಕ್ಷೆಯಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಸಮುದಾಯ ಸಂಘಟನೆಗಳಲ್ಲಿ ಕೊಪ್ಪಳ ಜಿಲ್ಲೆ ಅದರಲ್ಲೂ ಕಾರಟಗಿ ತಾಲೂಕು ಮುಂಚೂಣಿಯಲ್ಲಿದೆ. ಸಮುದಾಯಕ್ಕೆ ಮೀಸಲಾತಿ ದೊರೆಯುವವರೆಗೂ ಹೋರಾಟ ಕೈ ಬಿಡುವುದಿಲ್ಲ. ನಮಗೆ ಯಾವೊಬ್ಬ ನಾಯಕರು ಮುಖ್ಯವಲ್ಲ. ಭಕ್ತರು ಹಾಗೂ ಸಾಮಾನ್ಯರನ್ನು ಸೇರಿಸಿಕೊಂಡು ಹೋರಾಟ ರೂಪಿಸುವುದಾಗಿ ತಿಳಿಸಿದರು.

ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಎರಡೂ ಪೀಠಗಳು ಒಂದಾಗಲು ಕಾರಟಗಿ ತಾಲೂಕಿನ ಸಮುದಾಯ ಬಹಳಷ್ಟು ಶ್ರಮಿಸಿ ಈ ವೇದಿಕೆ ಕಲ್ಪಿಸಿದೆ. ಅನ್ನ, ಅಕ್ಷರ, ಆಶ್ರಯ, ಆರೋಗ್ಯ ನೀತಿಯಿಂದ ಮಠ ಕಟ್ಟಿ ಸಮಾಜದ ಕಡು ಬಡವರಿಗೆ ಶಿಕ್ಷಣ ನೀಡಿವ ಕೆಲಸ ಮಾಡುತ್ತೇವೆ. ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಈ ಬಗ್ಗೆ ಕಾನೂನು ಸಚಿವ ಎಚ್.ಕೆ. ಪಾಟೀಲ್, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಮೀಸಲಾತಿ ನೀಡಲು ಆಗ್ರಹಿಸಿದ್ದು ಸದ್ಯ ಈ ವಿಚಾರ ರಾಜ್ಯ ಸರ್ಕಾರದ ಅಂಗಳದಲ್ಲಿದೆ ಎಂದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಅದ್ಭುತ ಇತಿಹಾಸವಿದೆ. ಸಂಗೊಳ್ಳಿ ರಾಯಣ್ಣ ಹಾಗೂ ಯಲ್ಲಪ್ಪ ವಡ್ಡರ್ ರಾಣಿ ಚನ್ನಮ್ಮಗೆ ಬಲಗೈ ಅಂತಿದ್ದರು. ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸುವ ಮೂಲಕ ಕಿತ್ತೂರು ರಾಣಿ ಚನ್ನಮ್ಮ ಹೋರಾಟದ ಕಿಚ್ಚು ಹೊತ್ತಿಸಿದ್ದರು. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪಂಚಮಸಾಲಿ ಸಮುದಾಯ ಹಿಂದುಳಿದಿದೆ ಎನ್ನುವ ಕೀಳರಿಮೆ ನಿಮಗೆ ಬೇಡ. ಶಿಕ್ಷಣ, ಹೋರಾಟ, ಸಂಘಟನೆಗೆ ಒತ್ತು ನೀಡಬೇಕು. ಜಿಲ್ಲಾ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ 1 ಕೋಟಿ ರೂ. ಅನುದಾನ ನೀಡಿದ್ದೇನೆ. ಈ ಬಾರಿಯೂ 1 ಕೋಟಿ ರೂ. ನೀಡುವ ಭರವಸೆ ನೀಡಿದರು.

ಮಾಜಿ ಶಾಸಕ ಬಸವರಾಜ ದಢೇಸುಗೂರು, ಮಾಜಿ ಸಂಸದ ಸಂಗಣ್ಣ ಕರಡಿ, ಮುಖಂಡ ಬಸವರಾಜ ಕ್ಯಾವಟರ್, ಸಮುದಾಯದ ಅಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎ.ಜಿ. ಕಾರಟಗಿ, ರಾಯಚೂರು ವಿವಿಯಿಂದ ಡಾಕ್ಟರೇಟ್ ಪಡೆದ ದೇವೇಂದ್ರಪ್ಪ ಬಳೂಟಗಿ, ತೋಟಗಾರಿಕೆಗೆ ಸಂಬಂಧಿಸಿದಂತೆ ಪಿಎಚ್.ಡಿ ಪದವಿ ಪಡೆದ ರಂಜಿತ ರಮೇಶ ಅಯೋಧ್ಯ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಂಸದ ಶಿವರಾಮನಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಸಮುದಾಯದ ತಾಲೂಕು ಅಧ್ಯಕ್ಷ ಪಾಲಾಕ್ಷಪ್ಪ ಕೆಂಡದ್, ಮುಖಂಡರಾದ ಚನ್ನಬಸಪ್ಪ ಸುಂಕದ್, ಬಸವರಾಜ ಎತ್ತಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net