

ಕಾರಟಗಿ: ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಮಕ್ಕಳು ಕಡ್ಡಾಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮೊಳಗಿನ ಪ್ರತಿಭೆ ಹೊರ ತೆಗೆಯಬೇಕು ಎಂದು ಗಂಗಾವತಿ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರುಗೌಡ ಹೇಳಿದರು.
ತಾಲೂಕಿನ ಯರಡೋಣಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೂದಗುಂಪಾ ವಲಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಪ್ರತಿ ಮಗುವಿನಲ್ಲೂ ಒಂದೊಂದು ಕಲೆ ಇರುತ್ತದೆ. ಅವುಗಳನ್ನು ಹೊರ ತೆಗೆಯಲು ಸರ್ಕಾರ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದೆ. ಮಕ್ಕಳು ಮುಜುಗರಪಟ್ಟುಕೊಳ್ಳದೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮೊಳಗಿನ ಪ್ರತಿಭೆ ಹೊರಹಾಕಬೇಕು. ಇದಕ್ಕೆ ಶಿಕ್ಷಕರು ಮತ್ತು ಪಾಲಕರ ಸಹಕಾರ ಅಗತ್ಯ ಎಂದರು.
10 ಸರ್ಕಾರಿ ಹಾಗೂ 3 ಅನುದಾನರಹಿತ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ್, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಸವರಾಜ ರ‌್ಯಾವಳದ್, ಸಿಆರ್‌ಪಿಗಳಾದ ಮಂಜುನಾಥ ಚಿಕ್ಕೇನಕೊಪ್ಪ, ಭೀಮಣ್ಣ ಕರಡಿ, ಮುಖ್ಯಶಿಕ್ಷಕ ವಿಜಯಕುಮಾರ್, ಶಶಿಧರಸ್ವಾಮಿ, ಪ್ರಮುಖರಾದ ರವಿಸಿಂಗ್, ಬಸವರಾಜ ಹೊಸಮನಿ, ನಾಗರಾಜ, ರಮೇಶ ಇತರರಿದ್ದರು.