ವಿದ್ಯಾರ್ಥಿಗಳಿಗೆ ಭತ್ತ ಕಟಾವಿನ ಬಗ್ಗೆ ಪ್ರಾತ್ಯಕ್ಷಿಕೆ

Paddy Harvesting Demonstration
ಸಿದ್ದಾಪುರದ ಕಸ್ತೂರಬಾ ಗಾಂಧಿ ಬಾಲಿಕ ವಿದ್ಯಾಲಯದ (ಉರ್ದು) ವಿದ್ಯಾರ್ಥಿಗಳಿಗೆ ಭತ್ತ ಕಟಾವು ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
Published on

ಕಾರಟಗಿ: ತಾಲೂಕಿನ ಸಿದ್ದಾಪುರ ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಭತ್ತ ಕಟಾವು ಕುರಿತು ಮಂಗಳವಾರ ರೈತರಿಂದ ಪ್ರಾತ್ಯಕ್ಷಿಕೆ ನೀಡಲಾಯಿತು.

ಕಳೆದ ನಾಲ್ಕು ತಿಂಗಳ ಹಿಂದೆ ರೈತರ ಜಮೀನೊಂದರಲ್ಲಿ ಮಕ್ಕಳಿಗೆ ಭತ್ತ ನಾಟಿ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಬೆಳೆ ನಿರ್ವಹಣೆ, ಕಳೆ ಕೀಳುವುದು, ರೋಗಗಳ ನಿಯಂತ್ರಣ, ರಸಗೊಬ್ಬರ ಬಳಕೆ ಹಾಗೂ ಕ್ರಿಮಿನಾಶಕಗಳ ಸಿಂಪಡನೆ ಸೇರಿ ಇತರ ಕೃಷಿ ಚಟುವಟಿಕೆ ಕುರಿತು ಮಕ್ಕಳಿಗೆ ರೈತರಿಂದ ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದ ವಿದ್ಯಾರ್ಥಿಗಳು ಜಮೀನಿನಲ್ಲಿ ಭತ್ತ ನಾಟಿಯ ಪ್ರಯೋಗ ಮಾಡಿದ್ದರು.

ಈಗ ನಾಟಿ ಮಾಡಿದ್ದ ಜಮೀನನಲ್ಲಿ ಭತ್ತದ ಬೆಳೆ ಕಟಾವಿಗೆ ಬಂದ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಮಕ್ಕಳನ್ನು ಜಮೀನಿಗೆ ಕರೆದು ಕೊಂಡು ಹೋಗಿ ಭತ್ತ ಕಟಾವು ಕುರಿತು ರೈತರಾದ ರಾಜಾಸಾಬ್ ಹಾಗೂ ಅಮ್ಮಾಸಾಬ್ ಅವರು ಮಕ್ಕಳಿಗೆ ಸಂಪುರ್ಣ ಮಾಹಿತಿ ನೀಡಿದರು. ಬೆಳೆಗೆ ಯಾವ ಕಾಲದಲ್ಲಿ ಯಾವ ರಸಗೊಬ್ಬರ ನೀಡಬೇಕು? ಇಳುವರಿ ಹೆಚ್ಚಾಗಲು ಯಾವ ಕ್ರಮ ಅನುಸರಿಸಬೇಕು? ಫಸಲಿಗೆ ಮಾರುಕಟ್ಟೆಯಲ್ಲಿ ಸದ್ಯದ ಬೆಲೆ, ಬೆಳೆ ರವಾನೆ ಸೇರಿ ಇತರ ಮಾಹಿತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡರು. ಬಳಿಕ ನಾವು ಸಹ ಮುಂದಿನ ದಿನಗಳಲ್ಲಿ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವುದಾಗಿ ತಿಳಿಸಿದರು. ಶಾಲಾ ವಾರ್ಡನ್ ದುರುಗಮ್ಮ, ಸಿಬ್ಬಂದಿ ರಸೂಲ್ ಬೀ, ಲಕ್ಷ್ಮೀ, ವಿದ್ಯಾರ್ಥಿಗಳಾದ ಅದಿಬಾ, ಜಾಹೇದ್, ಫಾತೀಮಾ, ರೇಷ್ಮಾ, ರೋಷನಾ, ರಾಬಿಯಾ, ಆಲಿಯಾ ಇತರರಿದ್ದರು.

ಮಕ್ಕಳಿಗೆ ಬಾಲ್ಯದಿಂದಲೇ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ಭತ್ತ ನಾಡಿ, ಕಟಾವು ಪ್ರಾತ್ಯಕ್ಷಿಕೆ ನೀಡಲಾಗಿದೆ. ಮಕ್ಕಳು ಸಹ ಉತ್ಸುಕದಿಂದ ಕೃಷಿ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಕೃಷಿ ದೇಶದ ಆರ್ಥಿಕತೆ ಮುಖ್ಯ ಭಾಗವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಿಗೆ ಗಮನ ನೀಡುವುದಕ್ಕಿಂತ, ಪಠ್ಯೇತರ ಚಟುವಟಿಕೆಯಾದ ಕೃಷಿ ಬಗ್ಗೆಯೂ ಆಸಕ್ತಿ ವಹಿಸಬೇಕು.

ಚಂದ್ರಶೇಖರ ಗಣವಾರಿ

ಕೆಜಿಬಿವಿ ಶಾಲಾ ಮುಖ್ಯಶಿಕ್ಷಕ, ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net