ಆನ್ ಆ್ಯಂಡ್ ಆಫ್ ನಿರ್ಧಾರಕ್ಕೆ ವಿರೋಧ

04KARATAGI-02
Published on

ಕಾರಟಗಿ: ಆನ್ ಆ್ಯಂಡ್ ಆಫ್ ಪದ್ಧತಿ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿ ಕೆಳಭಾಗದ ರೈತರು ತಾಲೂಕಿನ ಸೋಮನಾಳ ಗ್ರಾಮದ ತುಂಗಭದ್ರಾ ಎಡದಂಡೆ 31ನೇ ವಿತರಣಾ ಕಾಲುವೆ ಜಾಕ್‌ವೆಲ್ ಬಳಿ ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.

ರೈತರಿಗೆ ಮಾಹಿತಿ ನೀಡದೆ ನೀರಾವರಿ ಇಲಾಖೆ ಅಧಿಕಾರಿಗಳು ಏಕಾಏಕಿ 48 ಗಂಟೆಗಳ ಕಾಲ ಆನ್ ಆ್ಯಂಡ್ ಆಫ್ ಪದ್ಧತಿ ಅಳವಡಿಕೆಗೆ ಮುಂದಾಗಿರುವುದು ಖಂಡನೀಯ. ಇದರಿಂದ 31/4, 6, 8 ಮತ್ತು 9ನೇ ಉಪವಿತರಣಾ ಕಾಲುವೆ ವ್ಯಾಪ್ತಿಯ ಬೂದಗುಂಪಾ, ತಿಮ್ಮಾಪುರ, ಕಿಂದಿಕ್ಯಾಂಪ್, ಚನ್ನಳ್ಳಿ, ಹಾಲಸಮುದ್ರ, ಯರಡೋಣಾ, ಗಣೇಶಕ್ಯಾಂಪ್, ದೇವಿಕ್ಯಾಂಪ್, ಈಳಿಗನೂರು ಕ್ಯಾಂಪ್, ಲಕ್ಷ್ಮೀ ಕ್ಯಾಂಪ್‌ಗಳ ರೈತರ ಜಮೀನುಗಳಿಗೆ ಸಮರ್ಪಕ ನೀರು ತಲುಪುವುದಿಲ್ಲ. ಈಗಾಗಲೇ ಭತ್ತ ನಾಟಿ ಮಾಡಿ 30ಕ್ಕೂ ಹೆಚ್ಚು ದಿನ ಕಳೆದಿದ್ದು ಜಮೀನುಗಳಿಗೆ ನಿರಂತರ ನೀರಿನ ಅವಶ್ಯಕತೆಯಿದೆ. ಇಂತಹ ಸಂದರ್ಭದಲ್ಲಿ ಆನ್ ಆ್ಯಂಡ್ ಆಫ್ ಮಾಡಿದರೆ ಬೆಳೆಗೆ ನೀರಿನ ಅಭಾವ ಉಂಟಾಗುತ್ತಿದೆ. ಈ ಪದ್ಧತಿ ಅಳವಡಿಸದಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ, ರೈತರ ಮನವಿಗೆ ಕವಡೆ ಮ್ಮತ್ತು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೇ ಅಧಿಕಾರಿಗಳು ಮುಂಚಿತವಾಗಿ ತಿಳಿಸಿದ್ದರೆ ಕೆಳಭಾಗದ ರೈತರು ಭತ್ತ ನಾಟಿ ಮಾಡುತ್ತಿರಲಿಲ್ಲ. ಈಗ ಎಕರೆಗೆ ಸಾವಿರಾರು ರೂ. ವ್ಯಯಿಸಿ ಭತ್ತ ನಾಟಿ ಮಾಡಿ ರಸಗೊಬ್ಬರ ಮತ್ತು ಕೀಟನಾಶಕ ಔಷಧ ಸಿಂಪಡಿಸಿದ್ದಾರೆ. ಅಧಿಕಾರಿಗಳು ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಈ ಪದ್ಧತಿಯನ್ನು ರದ್ದುಗೊಳಿಸಿ ಕೆಳಭಾಗಕ್ಕೆ ನಿಗದಿತ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಶರಣೇಗೌಡ ಮಾಲಿಪಾಟೀಲ್, ದಶರಥರೆಡ್ಡಿ, ಶರಣಪ್ಪ ಸುಂಕನಳ್ಳಿ, ಗಣಪತಿ, ನಾಗೇಶ್ವರರಾವ್, ಷಣ್ಮುಖ, ದೇವರಾಜ, ಮಲ್ಲಯ್ಯ, ಶರಣಯ್ಯಸ್ವಾಮಿ ಯರಡೋಣಾ, ನಾಗರಾಜ ಗುಂಡೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net