

ಕಾರಟಗಿ: ತಾಲೂಕಿನ ನಾಗನಕಲ್ ಬಳಿಯ ಬಹುಗ್ರಾಮ ಕುಡಿವ ನೀರು ಯೋಜನೆಯ ಕೆರೆಯಿಂದ ಚಳ್ಳೂರು ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿರುವ ಕಾರಣ ಕಳೆದ ಎರಡು ದಿನಗಳಿಂದ ನೀರು ಸರಬರಾಜು ನಿಲ್ಲಿಸಲಾಗಿದೆ.
ಒಂದು ತಿಂಗಳಿನಿಂದ ಕೆರೆಯಿಂದ ಜಾನುವಾರುಗಳಿಗೂ ಬಳಸಲು ಯೋಗ್ಯವಿಲ್ಲದಂತಹ ನೀರು ಪೂರೈಕೆಯಾಗುತ್ತಿತ್ತು. ಹೀಗಾಗಿ ಬಹುತೇಕ ಗ್ರಾಮಸ್ಥರು ದಿನಬಳಕೆಗೂ ನೀರನ್ನು ಉಪಯೋಗಿಸಲು ಹಿಂದೇಟು ಹಾಕುತ್ತಿದ್ದರು.
ಸಂಸ್ಕರಣೆಯದ್ದೇ ಸಮಸ್ಯೆ: ಕೆರೆಯಿಂದ ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರು ಸಂಸ್ಕರಣೆಯಾಗುತ್ತಿರುವ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ. ಹೊಂಡು ಮಿಶ್ರಿತ ನೀರಿನಲ್ಲಿ ಕಸ ಕಡ್ಡಿಯೂ ಹರಿದು ಬರುತ್ತಿದೆ. ಈ ನೀರು ಕುಡಿಯುವುದಿರಲಿ ಬಳಕೆಗೂ ಉಪಯೋಗಿಸುವಂತಿಲ್ಲ. ನೀರು ಸಂಗ್ರಹಿಸಿಟ್ಟ ಪಾತ್ರೆಗಳನ್ನು ಮತ್ತೊಮ್ಮೆ ತೊಳೆದಿಡುವ ಪರಿಸ್ಥಿತಿಯಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ.
ರೋಗ ಭೀತಿ: ಕಲುಷಿತ ನೀರು ಪೂರೈಕೆಯಿಂದಾಗಿ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹೀಗಾಗಿ ಕೆರೆ ನೀರನ್ನು ಜನ ಕುಡಿಯುವುದನ್ನೇ ಕೈಬಿಟ್ಟಿದ್ದು, ಜಾನುವಾರುಗಳಿಗೂ ಕುಡಿಸುತ್ತಿರಲಿಲ್ಲ. ಕೂಡಲೇ ಕಲುಷಿತ ನೀರು ಪೂರೈಕೆ ಸ್ಥಗಿತಗೊಳಿಸಿ ಶುದ್ಧ ನೀರು ಪೂರೈಸುವಂತೆ ಗ್ರಾಪಂಗೆ ಗ್ರಾಮಸ್ಥರು ಸೆ.01ರಂದು ಮನವಿ ಮಾಡಿದ್ದರು.
ಗ್ರಾಪಂ ಪತ್ರ: ಗ್ರಾಮಸ್ಥರ ಮನವಿ ಪರಿಗಣಿಸಿ ಸೆ.16ರಂದು ತಾಪಂಗೆ ಪತ್ರ ಬರೆದಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮು ನಾಯಕ, ಕೂಡಲೇ ಕೆರೆಯಿಂದ ನೀರು ಪೂರೈಕೆ ಸ್ಥಗಿತಗೊಳಿಸಿ, ಸದರಿ ಕೆರೆಯ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಕಳೆದೆರಡು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಳಿಸಿದ್ದೇವೆ. ಸ್ಯಾಂಡ್ ರೀಪ್ಲೇಸ್‌ಮೆಂಟ್ ಮಾಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಗ್ರಾಮಕ್ಕೆ ಶುದ್ಧ ನೀರು ಪೂರೈಸುತ್ತೇವೆ.
ದೇವಣ್ಣ ಕಟ್ಟಿ
ಎಇಇ, ಗ್ರಾಮೀಣ ನೀರು ಸರಬರಾಜು ಇಲಾಖೆ