

ಕಾರಟಗಿ: ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಬುಧವಾರ 10 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ವಿವಿಧ ಮೂಲಗಳಿಂದ 22.96 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ 22.86 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. ಹೀಗಾಗಿ 10 ಲಕ್ಷ ರೂ. ಉಳಿತಾಯವಾಗಲಿದೆ ಎಂದು ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಸಭೆಗೆ ವಿವರಿಸಿದರು.
2025-26ನೇ ಸಾಲಿನ ಆಯ-ವ್ಯಯದಲ್ಲಿ ಮನೆ ತೆರಿಗೆ, ನೀರಿನ ಶುಲ್ಕ, ಬಾಡಿಗೆಗಳು, ಮಾರುಕಟ್ಟೆಗಳು, ಕಟ್ಟಡ ಕಾಯಿದೆ ಯೋಜನೆಗೆ ಸಂಬಂಧಿಸಿದ ಶುಲ್ಕ, ಅಭಿವೃದ್ಧಿ ಶುಲ್ಕ ಮತ್ತು ಇತರ, ವ್ಯಾಪಾರ ಪರವಾನಗಿ ಶುಲ್ಕ, ರಾಜ್ಯ ಹಣಕಾಸು ಆಯೋಗದ ನಿಬರ್ಂಧಿತ ಅನುದಾನ, ಸರ್ಕಾರದಿಂದ ನಿರೀಕ್ಷಿಸಲಾದ ಅನುದಾನಗಳಲ್ಲಿ 15ನೇ ಹಣಕಾಸು ಆಯೋಗದ ಅನುದಾನ, ಸಂಸತ್ ಹಾಗೂ ವಿಧಾನಸಭೆ ಸದಸ್ಯರ ಪ್ರದೇಶ ಅಭಿವೃದ್ಧಿ ಅನುದಾನ, ಕೆಕೆಆರ್‌ಡಿಬಿ ಇತರ ಅಭಿವೃದ್ಧಿ ಅನುದಾನಗಳು, ನಗರೋತ್ಥಾನ, ಸ್ವಚ್ಛ ಭಾರತ ಯೋಜನೆ ಅನುದಾನ, ವಿದ್ಯುತ್ ಬಿಲ್ ಪಾವತಿ ಸಂಬಂಧಿಸಿದ ಅನುದಾನ ಅಲ್ಲದೆ ರಾಜ್ಯ ಮತ್ತು ಕೇಂದ್ರದ ಅನುದಾನಗಳು ಸೇರಿ ಇತರ ಮೂಲಗಳಿಂದ ಒಟ್ಟಾರೆ 22. 96 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.
ಸಾಮಾನ್ಯ ಆಡಳಿತ ಹಾಗೂ ಸಿಬ್ಬಂದಿ ವೇತನ ಖರ್ಚು, ಸಾರ್ವಜನಿಕ ವಿದ್ಯುತ್, ಆರೋಗ್ಯ, ನೀರು, ನೈರ್ಮಲ್ಯ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಇತರ ಖರ್ಚುಗಳಿವೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಭಿವೃದ್ಧಿ ಕೆಲಸ, ಸ್ವಚ್ಛ ಹಾಗೂ ಸುಂದರ ಪಟ್ಟಣವಾಗಿಸಲು ಆಯವ್ಯಯದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ತೆರಿಗೆ ವಸೂಲಾತಿಯಲ್ಲಿ ಶೇ.100 ಪ್ರಗತಿ ಸಾಧಿಸಿ ಉತ್ತಮ ಆಡಳಿತ ನೀಡಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಪಟ್ಟಣವನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಲಾಗುತ್ತದೆ. ಮೂಲ ಸೌಕರ್ಯಗಳನ್ನು ಒದಗಿಸುವುದಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಹೇಳಿದರು.
ಪುರಸಭೆ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಸದಸ್ಯರಾದ ರಾಜಶೇಖರ ಸಿರಿಗೇರಿ, ಸೋಮಶೇಖರ ಬೇರಿಗೆ, ಫಕೀರಪ್ಪ ನಾಯಕ, ರಮೇಶ ನಾಯಕ, ಹಿರೇಬಸಪ್ಪ ಸಜ್ಜನ, ಮಂಜುನಾಥ್ ಮೇಗೂರು, ದೊಡ್ಡಬಸವರಾಜ ಬೂದಿ, ಬಸವರಾಜ ಕೊಪ್ಪದ, ಶ್ರೀನಿವಾಸ ಕಾನುಮಲ್ಲಿ, ಸುರೇಶ, ಲಕ್ಷ್ಮೀದೇವಿ ಎತ್ತಿನಮನಿ, ಸುಜಾತಾ ನಾಗರಾಜ, ಹುಸೇನಬಿ, ನಾಮ ನಿರ್ದೇಶಿತ ಸದಸ್ಯ ಸಿದ್ದಪ್ಪ ಬೇವಿನಾಳ, ಪುರಸಭೆ ಸಿಬ್ಬಂದಿ ಮಂಜುನಾಥ್, ಸೀಮಾರಾಣಿ, ಆದೆಪ್ಪ, ಪರಮೇಶ್ವರಪ್ಪ, ರಾಘವೇಂದ್ರ, ನಾಗರಾಜ್ ತಳವಾರ ಇತರರಿದ್ದರು.