

ಕಾರಟಗಿ: ಪುರಸಭೆಯ 21ನೇ ವಾರ್ಡ್ ಉಪ ಚುನಾವಣೆಗೆ ಪಟ್ಟಣದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಕೇಂದ್ರದಲ್ಲಿ ಶನಿವಾರ ಜನರು ಶಾಂತಿಯುತವಾಗಿ ಮತದಾನ ಮಾಡಿದರು.
ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆದಿದ್ದು, ಉತ್ಸಾಹದಿಂದಲೇ ಮತದಾರರು ಕೇಂದ್ರಕ್ಕೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ವಾರ್ಡ್‌ನಲ್ಲಿ 490 ಪುರುಷ ಹಾಗೂ 487 ಮಹಿಳಾ ಮತದಾರರು ಸೇರಿ ಒಟ್ಟು 977 ಜನ ಮತದಾರರಿದ್ದಾರೆ.
ಈ ಪೈಕಿ 751 ಮತಗಳು ಚಲಾವಣೆಗೊಳ್ಳುವ ಮೂಲಕ ಶೇ.76.86 ಮತದಾನವಾಗಿದೆ. ಮತಪೆಟ್ಟಿಗೆಯನ್ನು ಪೊಲೀಸ್ ಬಂದೋಬಸ್ತ್‌ನೊಂದಿಗೆ ತಾಲೂಕು ಕಚೇರಿಯಲ್ಲಿರುವ ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋಗಲಾಯಿತು. ಪುರಸಭೆ ಸದಸ್ಯ ರಾಮಣ್ಣ ನಿಧನದ ಹಿನ್ನೆಲೆಯಲ್ಲಿ 21ನೇ ವಾರ್ಡ್ ಸದಸ್ಯ ಸ್ಥಾನ ತೆರವಾಗಿತ್ತು. ಕಾಂಗ್ರೆಸ್‌ನಿಂದ ಸುರೇಶ್, ಬಿಜೆಪಿಯಿಂದ ಯಲ್ಲಪ್ಪ ಕಣಕ್ಕಿಳಿದಿದ್ದಾರೆ. ಮತದಾನ ಮುಕ್ತಾಯವಾಗಿದ್ದು, ಮತ ಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ನ.26ರಂದು ತಾಲೂಕು ಕೇಂದ್ರದಲ್ಲಿ ಬೆಳಗ್ಗೆ 8 ರಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಚುನಾವಣಾ ಅಧಿಕಾರಿ ಎಚ್. ಮಲ್ಲಿಕಾರ್ಜುನ, ಮತದಾನ ಅಧಿಕಾರಿ ಶಶಿಧರ ಸ್ವಾಮಿ, ಚುನಾವಣಾ ಶಿರಸ್ತೇದಾರ್ ಉಮಾಮಹೇಶ್ವರ, ಚುನಾವಣಾ ವಿಷಯ ನಿರ್ವಾಹಕ ಈಶ್ವರ ಇದ್ದರು.