

ಕಾರಟಗಿ: ಬಣಜಿಗ ಸಮಾಜ ರಾಜ್ಯದಲ್ಲಿ ತನ್ನದೇ ಆದ ಶಕ್ತಿಯನ್ನು ಹೊಂದಿದ್ದು ಅನೇಕ ರಾಜಕೀಯ ಮುತ್ಸದ್ದಿಗಳ ಕೊಡುಗೆ ನೀಡಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಪಟ್ಟಣದ ಕೆರೆಬಸವೇಶ್ವರ ಕಲ್ಯಾಣಮಂಟಪದಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿನ ಪ್ರತಿಭಾನ್ವಿತ ಮಕ್ಕಳು ಹಾಗೂ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸುವುದು ಇತರರಿಗೂ ಸ್ಫೂರ್ತಿದಾಯಕವಾಗಿದೆ. ಕೇವಲ ತಮ್ಮ ಸಮುದಾಯಕ್ಕೆ ಮೀಸಲಿರಿಸದೇ ನಾಡಿಗೆ ಅಪಾರ ಕೊಡುಗೆ ನೀಡಿದ ಕೀರ್ತಿ ಬಣಜಿಗ ಸಮಾಜಕ್ಕೆ ಸಲ್ಲುತ್ತದೆ ಎಂದರು.
ಮಾಜಿಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಣಜಿಗ ಸಮಾಜ ವ್ಯಾಪಾರ, ಆಧ್ಯಾತ್ಮ ಹಾಗೂ ರಾಜಕೀಯವಾಗಿಯೂ ಮುಂಚೂಣಿಯಲ್ಲಿದೆ. ಆರ್ಥಿಕತೆಯ ಲೆಕ್ಕಾಚಾರಕ್ಕೆ ಹೆಸರುವಾಸಿಯಾಗಿರುವ ಬಣಜಿಗ ಸಮಾಜಕ್ಕೆ ನಾಡಿನ ಅನೇಕ ಮಠಗಳ ಉಸ್ತುವಾರಿ ವಹಿಸಿರುವುದೇ ದೊಡ್ಡ ಉದಾಹರಣೆ. ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಈ ಸಮುದಾಯದ ನಡೆಯನ್ನು ಇತರ ಸಮುದಾಯಗಳು ರೂಢಿಸಿಕೊಳ್ಳಬೇಕಿದೆ. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಇಂತಹ ಕಾರ್ಯಗಳಿಂದ ಪ್ರೇರೇಪಿಸಬೇಕು ಎಂದರು.
ಕಲಬುರಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಉಪಸಮಿತಿ ಅಧ್ಯಕ್ಷೆ ಲೀಲಾ ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿದರು. ಪುರಸಭೆ ಸದಸ್ಯರಾದ ರಾಜಶೇಖರ ಸಿರಿಗೇರಿ, ಸೋಮಶೇಖರ ಬೇರ‌್ಗಿ, ಸೌಮ್ಯಾ ಮಹೇಶ ಕಂದಗಲ್, ಸುಪ್ರಿಯಾ ಚಂದ್ರಶೇಖರ ಅರಳಿ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ಪ್ರಮುಖರಾದ ಡಾ.ವಿ.ವಿ.ಚಿನಿವಾಲ, ಸೋಮನಾಥ ಪಟ್ಟಣಶೆಟ್ಟಿ, ನಾಗರಾಜ ಅರಳಿ, ಶೋಭಾ ಸೋಮಲಾಪೂರ, ಪಾರ್ವತಿ ಪವಾಡಶೆಟ್ಟಿ, ಮಲ್ಲಿಕಾರ್ಜುನ ಕೊಟಗಿ, ಅಮರೇಶಪ್ಪ ಸಾಲಗುಂದಿ, ಜಗದೀಶ ಅವರಾದಿ, ವೀರಭದ್ರಪ್ಪ ಸುಳೇಕಲ್, ಬಸವರಾಜ ಅರಳಿ, ಮಹೇಶ ಕಂದಗಲ್, ವೀರೇಶ ಶೆಟ್ಟರ್ ಇತರರು ಇದ್ದರು.