

ಕಾರಟಗಿ: ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ 4895.33 ಹೆಕ್ಟೇರ್ ಪ್ರದೇಶದ ಭತ್ತದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಸಿದ್ದಾಪುರ, ಮರ್ಲಾನಹಳ್ಳಿ ಸೇರಿ ವಿವಿಧೆಡೆ ಹಾನಿಗೊಳಗಾದ ಹೊಲಗಳಿಗೆ ಭಾನುವಾರ ಭೇಟಿ ನೀಡಿ ಮಾತನಾಡಿದರು.
ಕಾರಟಗಿ ತಾಲೂಕಿನಲ್ಲಿ 12 ಗ್ರಾಮಗಳಲ್ಲಿ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಇದಲ್ಲದೇ, ಗಾಳಿ ಮಳೆಗೂ ಸಹ ಬೆಳೆ ನೆಲಕ್ಕೆ ಒರಗಿದೆ. ಇದರ ಜತೆಗೆ ಗಂಗಾವತಿ, ಕನಕಗಿರಿ ಹಾಗೂ ಕುಕನೂರಿನಲ್ಲೂ ಬೆಳೆಗಳು ನೆಲಕ್ಕಚ್ಚಿವೆ. ಜಿಲ್ಲೆಯಲ್ಲಿ ಒಟ್ಟು 12 ಸಾವಿರ ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಸಂಬಂಧ ಈಗಾಗಲೇ ಸಂಬಂಧ ಪಟ್ಟ ತಾಲೂಕುಗಳ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ನಾರ್ಮ್ಸ್ ಪ್ರಕಾರ ಪ್ರತಿ ಹೆಕ್ಟೇರ್ ಗೆ 17 ಸಾವಿರ ರೂ. ಬೆಳೆಹಾನಿ ಪರಿಹಾರ ವಿತರಿಸಲು ಅವಕಾಶವಿದೆ. ಆದರೆ, ನಮ್ಮಲ್ಲಿ ಈ ಬಾರಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ. ಬೆಳೆಹಾನಿ ಪರಿಹಾರ ವಿತರಣೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತರಲಾಗಿದೆ. ಸರ್ವೇ ಕಾರ್ಯ ಪೂರ್ಣವಾಗಲಿ. ಬಳಿಕ ಪರಿಹಾರ ವಿತರಣೆ ಮಾಡುವ ಬಗ್ಗೆ ಸಿಎಂ ಅಭಯ ನೀಡಿದ್ದಾರೆ. ಶೀಘ್ರವೇ ರೈತರ ಖಾತೆಗಳಿಗೆ ಬೆಳೆಹಾನಿ ಪರಿಹಾರ ವಿತರಿಸಲು ಕ್ರಮವಹಿಸುವುದಾಗಿ ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಬೂದಗುಂಪಾ, ಮುಖಂಡ ರೆಡ್ಡಿ ಶ್ರೀನಿವಾಸ್, ಶಿವರೆಡ್ಡಿ ನಾಯಕ, ಸಣ್ಣೆಪ್ಪ, ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಕೃಷಿ ಇಲಾಖೆ ಜೆಡಿ ಟಿ. ರುದ್ರೇಶಪ್ಪ ಸೇರಿ ಇತರರಿದ್ದರು.